ನವದೆಹಲಿ: ಚಿತ್ರರಂಗದ ಜೀವನದಲ್ಲಿ ನಾನು ಎಂದಿಗೂ ಸ್ಪರ್ಧೆಗೆ ಬಿದ್ದವಳಲ್ಲ, ನಾನೇ ಗೆಲ್ಲಬೇಕೆಂಬ ಇಚ್ಛೆಯೂ ನನಗಿರಲಿಲ್ಲ ಎಂದು ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರು ಹೇಳಿದ್ದಾರೆ.
ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ವಿದ್ಯಾ ಬಾಲನ್ ಅವರು ತಮ್ಮ ಚಿತ್ರರಂಗದ ಜೀವನದ ನಡೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾನು ಎಂದಿಗೂ ಸ್ಪರ್ಧೆಗೆ ಬಿದ್ದಿರಲಿಲ್ಲ. ನಾನೇ ಗೆಲ್ಲಬೇಕು ಹಾಗೂ ಸ್ಟಾರ್ ಪಟ್ಟ ಬೇಕೆಂಬ ಜಿದ್ದಿಗೂ ನಿಂತಿರಲಿಲ್ಲ. ಸಿನಿಮಾ ಗೆಲ್ಲಬೇಕೆಂಬ ಒಂದೇ ಆಸೆಯಿಂದ ಕೆಲಸದಲ್ಲಿ ತೊಡಗಿಕೊಂಡವಳು ನಾನು ಎಂದು ಹೇಳಿದ್ದಾರೆ.
ಇತರರು ಮಾಡಿರುವ ಚಿತ್ರಗಳನ್ನು ನೋಡುತ್ತಿರುತ್ತೇನೆ. ಇಷ್ಟವಾಗಿದರೆ ಅವರನ್ನು ಪ್ರಶಂಸಿಸುತ್ತೇನೆ. ಆದರೆ, ಎಂದಿಗೂ ಅವರ ರೀತಿ ಆಗಬೇಕೆಂಬ ಜಿದ್ದಿಗೆ ಬಿದ್ದಿರಲಿಲ್ಲ. ಸ್ಪರ್ಧಾತ್ಮಕ ಗುಣವನ್ನು ಹೊಂದಿದವಳು ನಾನಲ್ಲ. ನನ್ನ ಚಿತ್ರವನ್ನು ನಾನು ಮತ್ತೊಂದು ಚಿತ್ರಕ್ಕೆ ಎಂದಿಗೂ ಹೋಲಿಕೆ ಮಾಡಿ ನೋಡುವುದಿಲ್ಲ. ನನಗೆ ಹೇಗೆ ಇರಬೇಕು ಅನಿಸುತ್ತದೆಯೋ ಹಾಗೆ ಇರುತ್ತೇನೆ. ನನಗೆ ನನ್ನ ಮೇಲೆ ಆತ್ಮವಿಶ್ವಾಸವಿದ್ದು, ನನ್ನ ಸಹೋದರಿ ಹಾಗೂ ನನಗೆ ನನ್ನ ಪೋಷಕರು ಸ್ವತಂತ್ರ ಹಾಗೂ ಆತ್ಮವಿಶ್ವಾಸವೆಂಬ ದೊಡ್ಡ ಉಡುಗೊರೆಯನ್ನು ನೀಡಿದ್ದಾರೆ.
ಸಿನಿಮಾ ಗೆಲ್ಲಲಿ ಅಥವಾ ಸೋಲಲಿ ಅದರ ಬಗ್ಗೆ ನಾನು ಚಿಂತೆ ಮಾಡುವುದಿಲ್ಲ. ಈ ಸಿನಿಮಾ ಅಲ್ಲದಿದ್ದರೆ, ಮತ್ತೊಂದು ಸಿನಿಮಾ ಮಾಡಿದರೆ ಆಯಿತು. ಇನ್ನೊಂದು ಸಿನಿಮಾ ಗೆಲ್ಲುತ್ತದೆ ಎಂದು ಆಶಾಭಾವನೆಯನ್ನು ಇಟ್ಟುಕೊಂಡಿರುತ್ತೇನೆ. ನಾನು ಮಾಡಿದ ಕೆಲಸದಿಂದ ಸಮಾಧಾನ ಸಿಗಬೇಕೆಂದು ಬಯಸುತ್ತೇನೆ.
ನನಗೆ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಒಳ್ಳೆಯ ಹೆಸರು ಮಾಡಬೇಕು, ಜನರಿಗೆ ಚಿತ್ರ ಇಷ್ಟವಾಗಬೇಕೆಂಬುದಷ್ಟೇ ನನ್ನ ಗುರಿಯಾಗಿದ್ದು, ಅದನ್ನು ಹೊರತು ಪಡಿಸಿ ಸ್ಪರ್ಧೆಗೆ ನಿಲ್ಲುವ, ಸ್ಟಾರ್ ಗಿರಿ ದಕ್ಕಿಸಿಕೊಳ್ಳಬೇಕೆಂದು ಚಿತ್ರರಂಗಕ್ಕೆ ಬಂದವಳಲ್ಲ. ಪ್ರತೀಯೊಬ್ಬರ ಜೀವನದಲ್ಲಿಯೂ ಒಂದಲ್ಲ ಒಂದು ರೀತಿಯಲ್ಲಿ ಸೋಲು-ಗೆಲವು ಇದ್ದೇ ಇರುತ್ತದೆ. ಅದು ಜೀವನದ ಒಂದು ಭಾಗವಾಗಿದೆ ಎಂದು ತಿಳಿಸಿದ್ದಾರೆ.
ಒಂದಾದ ಮೇಲೊಂದರಂತೆ ಸಾಕಷ್ಟು ಯಶಸ್ಸು ಚಿತ್ರಗಳಲ್ಲಿ ನಡೆಸಿರುವ ವಿದ್ಯಾಬಾಲನ್ ಅವರು ಇದೀಗ ತಮ್ಮ ಬಹು ನಿರೀಕ್ಷಿತ ಚಿತ್ರ ಕಹಾನಿ-2 ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.