ಬೆಂಗಳೂರು: 'ಪುಷ್ಪಕ ವಿಮಾನ' ಸಿನೆಮಾ ತಂದೆ ಮತ್ತು ಮಗಳ ಸಂಬಂಧದ ಸುತ್ತ ಸುತ್ತುವ ಚಿತ್ರ ಎಂಬ ಎಳೆ ತಿಳಿದಿತ್ತಾದರೂ, ಸಿನೆಮಾದಲ್ಲಿ ರಚಿತಾ ರಾಮ್ ಪಾತ್ರದ ಬಗ್ಗೆ ಚಿತ್ರ ತಂಡ ಯಾವುದೇ ಸುಳಿವು ನೀಡಿರಲಿಲ್ಲ. ಈಗ ನಟಿಯ ಹುಟ್ಟುಹಬ್ಬಕ್ಕೆ ಅವರ ಮತ್ತೊಂದು ಸ್ಟಿಲ್ ಬಿಡುಗಡೆ ಮಾಡಿರುವ ಚಿತ್ರತಂಡ, ನಟಿ ಸಿನೆಮಾದಲ್ಲಿ ವಕೀಲೆ ಪಾತ್ರ ಮಾಡಿರುವ ಸುಳಿವು ನೀಡಿದೆ. ರಮೇಶ್ ಅರವಿಂದ್ ಮತ್ತು ಬಾಲನಟಿ ಯುವಿನ ಪಾರ್ಥವಿ ಈ ಸಿನೆಮಾದ ಪ್ರಮುಖ ನಟರು.
ಈ ಪಾತರದ ಬಗ್ಗೆ ಹೆಚ್ಚು ಗುಟ್ಟು ಬಿಚ್ಚಿಟ್ಟರೆ ಸಿನೆಮಾದ ಕುತೂಹಲವನ್ನು ತಗ್ಗಿಸುತ್ತದೆ ಎನ್ನುವ ನಿರ್ಮಾಪಕರಲ್ಲಿ ಒಬ್ಬರಾದ ವಿಖ್ಯಾತ್ "ರಮೇಶ್, ಯುವಿನ ಮತ್ತು ರಚಿತಾ ಕಡೆಯಿಂದ ಇನ್ನು ಹಲವಾರು ಅಚ್ಚರಿಗಳಿವೆ ಮತ್ತು ಪ್ರೇಕ್ಷಕರು ಸಿನೆಮಾ ನೋಡಿನ ಮೇಲೆ ಅವುಗಳನ್ನೆಲ್ಲ ಅನುಭವಿಸಲಿದ್ದಾರೆ" ಎನ್ನುತ್ತಾರೆ.
'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾ ಖ್ಯಾತಿಯ ಸಂಗೀತ ನಿರ್ದೇಶಕ ಚರಣ್ ರಾಜ್ ಈ ಸಿನೆಮಾಗೂ ಸಂಗೀತ ನೀಡಿದ್ದು, ಪ್ರಸಕ್ತ ಸಿನೆಮಾದ ಆಲ್ಬಮ್ ಅನ್ನು ಜನ ಮೆಚ್ಚಿದ್ದಾರೆ ಎನ್ನಲಾಗುತ್ತಿದೆ.
ಎಸ್ ರವೀಂದ್ರನಾಥ್ ಚೊಚ್ಚಲ ಬಾರಿಗೆ ನಿರ್ದೇಶಿಸರುವ ಈ ಚಿತ್ರದಲ್ಲಿ ಜೂಹಿ ಚಾವ್ಲಾ ವಿಶೇಷ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. "ದೀಪಾವಳಿ ಹಬ್ಬದ ಸಮಯಕ್ಕೆ ಬಿಡುಗಡೆ ಮಾಡಲಿದ್ದೇವೆ" ಎನ್ನುತ್ತಾರೆ ವಿಖ್ಯಾತ್.
ಗುರುಪ್ರಸಾದ್ ಸಿನೆಮಾಗೆ ಸಂಭಾಷಣೆ ಬರೆದಿದ್ದು, ಭುವನ್ ಗೌಡ ಛಾಯಾಗ್ರಾಹಕ.