ಬೆಂಗಳೂರು: ಕನ್ನಡ ಸಿನಿ ಉಧ್ಯಮದ ಪ್ರಸ್ತುತ ಬಹು ಬೇಡಿಕೆಯ ನಟಿ ರಾಧಿಕಾ ಪಂಡಿತ್ ಅವರು, ತಾವು ಮದುವೆ ಬಳಿಕವೂ ಸಿನಿಮಾಗಳಲ್ಲಿ ನಟಿಸುವುದಾಗಿ ಹೇಳಿದ್ದಾರೆ.
ಮದುವೆ ಬಳಿಕ ಚಿತ್ರಗಳಿಗೆ ನಟಿ ರಾಧಿಕಾ ಪಂಡಿತ್ ಫುಲ್ ಸ್ಟಾಪ್ ಹಾಕಲಿದ್ದಾರೆ ಎಂಬ ಸಾಮಾಜಿಕ ಜಾಲತಾಣಗಳ ಸುದ್ದಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ನಟಿ ರಾಧಿಕಾ ಪಂಡಿತ್ ಮದುವೆ ಬಳಿಕವೂ ತಾವು ಚಿತ್ರರಂಗದಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ. "ಮದುವೆ ನಂತರ ನಟನೆಗೆ ಬ್ರೇಕ್ ಹಾಕುವ ಪ್ರಮೇಯವೇ ಇಲ್ಲ. ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರವೂ ನಟಿಸುತ್ತೇನೆ. ನನ್ನ ವೃತ್ತಿಗೆ ಯಾವುದೇ ರೀತಿಯ ಅಡೆತಡೆ ಬರುವುದಿಲ್ಲ. ಯಶ್ ಕೂಡ ನಟನೆಗೆ ಸಮ್ಮತಿಸಿದ್ದಾರೆ ಎಂದು ರಾಧಿಕಾ ಹೇಳಿದ್ದಾರೆ.
ನಟಿ ರಾಧಿಕಾ ಪಂಡಿತ್ ಅವರ ವಿವಾಹ ನಿಶ್ಚಿತಾರ್ಥ ಮತ್ತೋರ್ವ ಬಹು ಬೇಡಿಕೆಯ ನಟ ರಾಕಿಂಗ್ ಸ್ಟಾರ್ ಯಶ್ ರೊಂದಿಗೆ ಇತ್ತೀಚೆಗೆ ಗೋವಾದಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಚಿತ್ರರಂಗಕ್ಕೆ ಜಂಟಿಯಾಗಿ ಆಗಮಿಸಿದ್ದ ಈ ಜೋಡಿ ಚಿತ್ರರಂಗದಲ್ಲೂ ಖ್ಯಾತಿ ಪಡೆದಿತ್ತು. ಇದೀಗ ಚಿತ್ರಗಳಲ್ಲಿನ ಯಶಸ್ಸಿನ ಬೆನ್ನಲ್ಲೇ ನೈಜಿ ಜೀವನದಲ್ಲೂ ಈ ಜೋಡಿ ಜೋಡಿಯಾಗಲು ಹೊರಟಿವೆ. ಪ್ರಸ್ತುತ ರಾಧಿಕಾ ಅವರ ಖಾತೆಯಲ್ಲಿ ಎರಡು ಚಿತ್ರಗಳಿದ್ದು, ಈ ಪೈಕಿ ದೊಡ್ಮನೆ ಹುಡ್ಗ ಚಿತ್ರ ಕಳೆದ ವಾರಾಂತ್ಯದಲ್ಲಿ ಬಿಡುಗಡೆಯಾಗಿತ್ತು.
ಉಳಿದಿರುವ ಸಂತು ಸ್ಟ್ರೇಟ್ ಫಾರ್ವರ್ಡ್ ಚಿತ್ರ ಇದೇ ಅಕ್ಟೋಬರ್ ತಿಂಗಳಾಂತ್ಯದಲ್ಲಿ ಅಂದರೆ ದೀಪಾವಳಿ ಹೊತ್ತಿಗೆ ಬಿಡುಗಡೆಯಾಗಲಿದ್ದು, ಈ ಚಿತ್ರದ ಬಳಿಕ ಈ ಸ್ಟಾರ್ ಜೋಡಿ ವಿವಾಹವಾಗಲಿದೆ.
ಸ್ಯಾಂಡಲ್ವುಡ್ನ ಸ್ಟಾರ್ ಜೋಡಿ ನಿಶ್ಚಿತಾರ್ಥವಾದ ಬಳಿಕ, ಇದೀಗ ಜತೆಯಾಗಿಯೇ ‘ಸಂತು ಸ್ಟ್ರೇಟ್ಫಾರ್ವರ್ಡ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದೇ ರಾಧಿಕಾಳ ಕೊನೆಯ ಚಿತ್ರ ಎಂಬ ವದಂತಿಗಳು ಸ್ಯಾಂಡಲ್ವುಡ್ ವಲಯದಲ್ಲಿ ಹರಿದಾಡುತಿತ್ತು. ಆದರೆ ನಟಿ ರಾಧಿಕಾ ಈ ಗಾಳಿ ಸುದ್ದಿಯನ್ನು ತಳ್ಳಿಹಾಕಿದ್ದಾರೆ. ಮುಂಬರುವ ಡಿಸೆಂಬರ್ ಅಥವಾ ಜನವರಿಯಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದೆ. ಡಿಸೆಂಬರ್ ಅಂತ್ಯದಲ್ಲಿ ಮುಂದಿನ ಜನವರಿ ಆರಂಭದಲ್ಲಿ ಈ ಜೋಡಿ ವಿವಾಹವಾಗುವ ಸಾಧ್ಯತೆ ಇದೆ.