ಆಕ್ಲ್ಯಾಂಡಿನಿಂದ ಸ್ಯಾಂಡಲ್ವುಡ್ ಗೆ ಬಂಡ ಲತಾ ಹೆಗಡೆ
ಬೆಂಗಳೂರು: ಹೊಸ ತಾರೆಯರನ್ನು ಪರಿಚಯಿಸುವ ನಿರ್ದೇಶಕ ಮಹೇಶ್ ಬಾಬು ಅವರ ಉತ್ಸಾಹ ಐಂದ್ರಿತಾ ರೇ, ಕೀರ್ತಿ ಕರಬಂಧ, ನಿಕ್ಕಿ ಗಲರಾಣಿ ಮುಂತಾದವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿ ಅವರು ನೆಲೆಯೂರುವಂತೆ ಸಹಕರಿಸಿದೆ. ಈ ಬಾರಿ ನಿರ್ದೇಶಕ ದೂರದ ಆಕ್ಲ್ಯಾಂಡಿನಿಂದ ಲತಾ ಹೆಗಡೆ ಅವರನ್ನು ಕರೆತಂದಿದ್ದಾರೆ.
ನವೆಂಬರ್ 7 ರಂದು ಚಾಲನೆ ಸಿಗಲಿರುವ ಚೇತನ್ ನಟನೆಯ ಸಿನೆಮಾಗೆ ಹೀರೋಯಿನ್ ಹುಡುಕಾಟದಲ್ಲಿದ್ದ ಮಹೇಶ್ ಬಾಬು ಅವರಿಗೆ ತೆಲುಗು ನಿರ್ದೇಶಕ ಮೆಹೆರ್ ರಮೇಶ್, ಲತಾ ಅವರನ್ನು ಪರಿಚಯಿಸಿದರಂತೆ.
ಈ ವಿಷಯವನ್ನು ಧೃಢೀಕರಿಸುವ ಮಹೇಶ್, ಲತಾ ಆಕ್ಲ್ಯಾಂಡ್ ನಿವಾಸಿ. ಆದರೆ ಅವರು ತಮ್ಮ ಬೇರುಗಳನ್ನು ಕಡಿದುಕೊಂಡಿಲ್ಲ ಮತ್ತು ಕನ್ನಡವನ್ನು ಸುಲಲಿತವಾಗಿ ಮಾತನಾಡುತ್ತಾರೆ ಎಂದಿದ್ದಾರೆ.
"ನಾನು ಮಹೇಶ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದೆ. ನನ್ನ ಪಾತ್ರದ ಬಗ್ಗೆ ಅವರು ಕಳೆದ ತಿಂಗಳು ನನಗೆ ತಿಳಿಸಿದರು. ಪ್ರಾದೇಶಿಕ ಭಾಷೆಯಲ್ಲಿ ನಾನು ಸುಲಲಿತವಾಗಿ ಮಾತನಾಡುವುದು ಅವರಿಗೆ ಇಷ್ಟವಾಯಿತು" ಎನ್ನುತ್ತಾರೆ ನಟಿ.
ಹೊಸನಟಿ ಇನ್ನು ಹೆಸರಿಡದ ಈ ಚಿತ್ರದಲ್ಲಿ ಪತ್ರಕರ್ತೆಯ ಪಾತ್ರದಲ್ಲಿ ನಟಿಸಲಿದ್ದಾರಂತೆ. "ಹಲವು ನಟಿಯರಿಗೆ ಅದೃಷ್ಟ ತಂದಿರುವ ನಿರ್ದೇಶಕನ ಜೊತೆಗೆ ಕೆಲಸ ಮಾಡುವುದಕ್ಕೆ ನನಗೆ ಅತೀವ ಸಂತಸವಾಗಿದೆ. ಅವರ ನಿರ್ದೇಶನದ 'ಅರಸು' ನನ್ನ ನೆಚ್ಚಿನ ಚಿತ್ರಗಳಲ್ಲಿ ಒಂದು" ಎನ್ನುತ್ತಾರೆ ಲತಾ.
ಹೊನ್ನಾವರದಲ್ಲಿ ಜನಿಸಿದ ಲತಾ, ತಮ್ಮ 6 ನೆಯ ವಯಸ್ಸಿಗೆ ಆಕ್ಲ್ಯಾಂಡ್ ಗೆ ತೆರಳಿದವರು. ಅವರು ಅಲ್ಲಿ ತಮ್ಮ ಪೋಷಕರು ಮತ್ತು ತಂಗಿಯ ಜೊತೆಗೆ ವಾಸಿಸುತ್ತಾರಂತೆ. ಗ್ಲಾಮರ್ ಲೋಕಕ್ಕೆ ಆಕಸ್ಮಿಕವಾಗಿ ಬಂದೆ ಎನ್ನುವ ಅವರು "ನನ್ನ ಗೆಳೆಯರ ಹೇಳಿದ್ದರಿಂದ ನಾನು ಸೌಂದರ್ಯ ಸ್ಪರ್ಧೆಯ ಭಾಗವಾಗಿದ್ದೆ. ತದನಂತರ ನನಗೆ ಸಿನೆಮಾದಲ್ಲಿ ನಟಿಸಲು ಹಲವು ಕರೆಗಳು ಬರುತ್ತಿದ್ದವು" ಎನ್ನುತ್ತಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos