ಬೆಂಗಳೂರು: ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ರಾಜಕುಮಾರ ಸಿನಿಮಾಗಳನ್ನು ನೀಡಿ ಸ್ಟಾರ್ ಡೈರೆಕ್ಟರ್ ಎಂಬ ಖ್ಯಾತಿಗೆ ಪಾತ್ರವಾಗಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಮುಂದಿನ ಚಿತ್ರವನ್ನು ನಿರ್ದೇಶಿಸಲಿದ್ದಾರೆ.
ಯಶಸ್ಸಿಗೆ ತಮ್ಮ ತಂಡವೇ ಕಾರಣ ಎಂದು ಹೇಳುವ ಸಂತೋಷ್, ಇತ್ತೀಚೆಗೆ 'ಮೈ ಟೀಂ, ಮೈ ಸ್ಟ್ರೆಂತ್' ಇದು ಒನ್ ಮ್ಯಾನ್ ಶೋ ಅಲ್ಲ, ನನ್ನ ಮತ್ತು ನನ್ನ ತಂಡಕ್ಕೆ ತೋರಿದ ಪ್ರೀತಿಗೆ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.
ಮೊದಲ ಎರಡು ಸಿನಿಮಾಗಳ ಯಶಸ್ಸಿನಲ್ಲಿರುವ ಸಂತೋಷ್ ಮೂರನೇ ಸಿನಿಮಾದಲ್ಲಿ ಯಾರು ಹೀರೋ ಎಂಬ ಬಗ್ಗೆ ಅಭಿಮಾನಿಗಳು ಸಾಕಷ್ಟು ಕೂತೂಹಲಭರಿತರಾಗಿದ್ದಾರೆ. ಸುದೀಪ್ ಅಥವಾ ಶಿವರಾಜ್ ಕುಮಾರ್ ಸಂತೋಷ್ ನಿರ್ದೇಶನದ ಸಿನಿಮಾಗೆ ನಾಯಕರಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇಂದು ನಿರ್ದೇಶಕ ಸಂತೋಷ್ ಹುಟ್ಟಿದ ದಿನವಾಗಿದ್ದು, ನಿರ್ದೇಶಕರು ಹೊಸ ಪ್ರಾಜೆಕ್ಟ್ ಬಗ್ಗೆ ಏನಾದರೂ ಪ್ರಕಟಿಸಬಹುದು ಎಂದು ಹಲವರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಸದ್ಯಕ್ಕೆ ಯಾವುದೇ ಮಾಹಿತಿಯನ್ನು ಅಧಿಕೃತವಾಗಿ ಘೋಷಿಸುವುದಿಲ್ಲ ಎಂದು ಸಂತೋಷ್ ಹೇಳಿದ್ದಾರೆ.
ತಮ್ಮ ಮುಂದಿನ ಸಿನಿಮಾದ ನಾಯಕ ಯಾರು ಎಂಬುದನ್ನು ಪ್ರಕಟಿಸುವ ಮುನ್ನ ಕಥೆ ಅಂತಿಮವಾಗಬೇಕು ಎಂದು ಅವರು ಹೇಳಿದ್ದಾರೆ. ತಮ್ಮ ಮುಂದಿನ ಚಿತ್ರದಲ್ಲಿ ಸಮಾಜಕ್ಕೆ ಒಂದು ಸಂದೇಶ ನೀಡುವ ಕಥೆಯಿರುತ್ತದೆ ಎಂದು ಹೇಳಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಜೊತೆ ಕೆಲಸ ಮಾಡಲು ಸಂತೋಷ ವ್ಯಕ್ತ ಪಡಿಸಿರುವ ನಿರ್ದೇಶಕ,ಸಿನಿಮಾ ಬಗ್ಗೆ ಅವರಿಗೆ ಒಳ್ಳೆಯ ಅಭಿರುಚಿಯಿದೆ, ತಂತ್ರಜ್ಞರ ಮೌಲ್ಯ ಅವರಿಗೆ ತಿಳಿದಿದೆ ಎಂದು ಹೇಳಿದ್ದಾರೆ. ವಿಜಯ್ ಕಿರಂಗದೂರ್ ಮತ್ತು ಕಾರ್ತಿಕ್ ಗೌಡ ಹೊಂಬಾಳೆ ಫಿಲ್ಮ್ಸ್ ಹಿಂದಿದ್ದಾರೆ ಎಂದು ಸಂತೋಷ್ ಹೇಳಿದ್ದಾರೆ.