ಇದೇ ಮೊದಲ ಬಾರಿಗೆ ಕನ್ನಡದ ರಾಜರತ್ನ ಪುನೀತ್ ರಾಜಕುಮಾರ್ ನಾಯಕನಾಗಿ ಅಭಿನಯಿಸುತ್ತಿರುವ ಅಂಜನಿಪುತ್ರ ಚಿತ್ರವನ್ನು ನಿರ್ದೇಶಿಸುತ್ತಿರುವ ಸ್ಯಾಂಡಲ್ವುಡ್ ನ ನಿರ್ದೇಶಕ ಹರ್ಷ ತಾನು ಕಳೆದ 18 ವರ್ಷಗಳಿಂದ ಪುನೀತ್ ಅವರೊಂದಿಗೆ ಕೆಲಸ ಮಾಡಿಕೊಂಡು ಬಂದಿರುವುದಾಗಿ ಹೇಳಿದ್ದಾರೆ.
ತಮ್ಮ ಚಿತ್ರಕ್ಕಾಗಿ ವಿಲಕ್ಷಣ ಸ್ಥಳಗಳನ್ನು ಹುಡುಕುವ ಹರ್ಷ ಅಂಜನಿಪುತ್ರ ಚಿತ್ರಕ್ಕಾಗಿ ಸ್ಕಾಟ್ ಲ್ಯಾಂಡ್ ಅನ್ನು ಆಯ್ಕೆ ಮಾಡಿಕೊಂಡಿದ್ದರು. ಚಿತ್ರ ಕೆಲ ಹಾಡುಗಳನ್ನು ಸ್ಕಾಟ್ ಲ್ಯಾಂಡ್ ನಲ್ಲಿ ಚಿತ್ರೀಕರಿಸಿಕೊಂಡು ಮರಳಿರುವ ಹರ್ಷ ಇಂದು ತಮ್ಮ 37 ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಸಿಟಿ ಎಕ್ಸ್ ಪ್ರೆಸ್ ಜತೆ ಮಾತನಾಡಿದ ಹರ್ಷ ಅವರು ತಾವು ಚಿತ್ರರಂಗಕ್ಕೆ ಬಂದು 18 ವರ್ಷಗಳಾಗಿದ್ದು ಅಲ್ಲಿಂದ ಪುನೀತ್ ಅವರೊಂದಿಗೆ ಒಡನಾಟವನ್ನು ಇಟ್ಟುಕೊಂಡಿರುವುದಾಗಿ ಹೇಳಿದ್ದಾರೆ. ಅಂಜನಿಪುತ್ರ ಇದು ನನ್ನ ನಿರ್ದೇಶನದ 7ನೇ ಚಿತ್ರ. ಪ್ರತಿಯೊಂದು ಚಿತ್ರದ ನಿರ್ದೇಶನವು ನನಗೆ ಹೊಸ ಪ್ರಾರಂಭದಂತೆ ಕಾಣುತ್ತದೆ. ಮತ್ತು ಪ್ರಯಾಣವು ಫಲಪ್ರದವಾಗಿದೆ ಎಂದರು.
ನೃತ್ಯ ನಿರ್ದೇಶಕನಾಗಿ ಚಿತ್ರರಂಗಕ್ಕೆ ಕಾಲಿಟ್ಟ ನಾನು ಪುನೀತ್ ರಾಜಕುಮಾರ್ ಅವರ ಹಲವು ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದೇನೆ. ಹೀಗಾಗಿ ಅವರೊಂದಿಗೆ ಕೆಲಸ ಮಾಡಲು ನನಗೆ ಯಾವುದೇ ರೀತಿಯ ಅಂಜಿಕೆ ಇಲ್ಲ ಎಂದರು.
ಅಂಜನಿಪುತ್ರ ಚಿತ್ರದ ಚಿತ್ರೀಕರಣ ಈಗಾಗಲೇ ಶೇಕಡ 80ರಷ್ಟು ಮುಕ್ತಾಯವಾಗಿದೆ. ಇನ್ನೂ 25 ದಿನಗಳ ಚಿತ್ರೀಕರಣ ಬಾಕಿ ಇದೆಯಂತೆ. ಚಿತ್ರದಲ್ಲಿ ಕಿರಿಕ್ ಪಾರ್ಟಿಯ ರಶ್ಮಿಕ ಮಂದಣ್ಣ, ರಮ್ಯಾ ಕೃಷ್ಣ, ಸಾಧು ಕೋಕಿಲ, ಚಿಕ್ಕಣ್ಣ, ಮುಕೇಶ್ ರಿಷಿ ಸೇರಿದಂತೆ ಹಲವು ಅಭಿನಯಿಸಿದ್ದಾರೆ. ಚಿತ್ರವನ್ನು ಎಂಎನ್ ಕುಮಾರ್ ನಿರ್ಮಿಸುತ್ತಿದ್ದಾರೆ.