ಸ್ಯಾಂಡಲ್ ವುಡ್ ನ ಬ್ಲಾಕ್ ಬಸ್ಟರ್ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಅಭಿಮಾನಿಗಳ ಹೃದಯ ಗೆದ್ದಿದ್ದ ರಶ್ಮಿಕಾ ಮಂದಣ್ಣನವರ ನಿಜವಾದ ಆಟ ಈಗ ಶುರುವಾಗಿದೆ.
ಕಳೆದ ವರ್ಷ ಡಿಸೆಂಬರ್ 30ರಂದು ಬಿಡುಗಡೆಯಾಗಿದ್ದ ಕಿರಿಕ್ ಪಾರ್ಟಿ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಸಾನ್ವಿ ಪಾತ್ರದಲ್ಲಿ ಅಭಿನಯಿಸಿದ್ದರು. ಕರ್ನಾಟಕದಲ್ಲಿ ರಶ್ಮಿಕಾ ಅವರನ್ನು ಈಗಲು ಸಾನ್ವಿ ಎಂದೇ ಗುರುತಿಸುತ್ತಾರೆ. ವರ್ಷಾಂತ್ಯದಲ್ಲಿ ರಶ್ಮಿಕಾ ಮಂದಣ್ಣ ಅವರ ಎರಡು ಚಿತ್ರಗಳು ತೆರೆಗೆ ಬರಲು ರೆಡಿಯಾಗಿವೆ. ಅದರಲ್ಲಿ ಒಂದು ಪುನೀತ್ ರಾಜ್ ಕುಮಾರ್ ಜೊತೆ ನಟಿಸಿರುವ ಅಂಜನಿಪುತ್ರ ಶೀಘ್ರ ಬಿಡುಗಡೆಗೆ ಸಿದ್ಧವಾಗಿದೆ.
ಸಿಟಿ ಎಕ್ಸ್ ಪ್ರೆಸ್ ಜತೆ ಮಾತನಾಡಿದ ಅವರು, ಕಿರಿಕ್ ಪಾರ್ಟಿ ಚಿತ್ರದಲ್ಲಿನ ನನ್ನ ಪಾತ್ರದಿಂದ ನಿಜಕ್ಕೂ ನನ್ನನ್ನು ಹೆಚ್ಚು ಗುರುತಿಸಿಕೊಳ್ಳಲು ಸಾಧ್ಯವಾಯಿತು, ಅದು ನನ್ನ ವೃತ್ತಿ ಬದುಕಿಗೆ ಒಂದು ಗುರುತು ನೀಡಿತು ಎಂದು ಸಂತಸ ಹಂಚಿಕೊಂಡರು.
ಕಿರಿಕ್ ಪಾರ್ಟಿ ಚಿತ್ರದಿಂದ ಬಹುಬೇಗ ನಾನು ಜನರ ಅಭಿಮಾನ ಗಳಿಸಿದ್ದೇನೆ. ನನ್ನ ಮೊದಲ ಪ್ರಯತ್ನವನ್ನು ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. ಕನ್ನಡದಲ್ಲಿ ಇದುವರಗೆ ನನ್ನ ಒಂದೇ ಚಿತ್ರ ಬಿಡುಗಡೆಯಾಗಿದೆ. ಹೀಗಾಗಿ ತೆಲುಗಿನಲ್ಲಿ ನನಗೆ ಹೆಚ್ಚು ಅವಕಾಶಗಳು ಸಿಕ್ಕವು. ನಿರೀಕ್ಷೆ ಹೆಚ್ಚುತ್ತಿರುವುದರಿಂದ ನನ್ನ ವೃತ್ತಿಜೀವನವನ್ನು ನಾನು ಹೆಚ್ಚು ಜವಾಬ್ದಾರಿಯಿಂದ ತೆಗೆದುಕೊಳ್ಳಬೇಕು. ನಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ ಮತ್ತು ನನ್ನ ಯೋಜನೆಗಳನ್ನು ಆಯ್ಕೆ ಮಾಡಲು ಸಮಯ ತೆಗೆದುಕೊಳ್ಳುತ್ತೇನೆ ಎಂದು ರಶ್ಮಿಕಾ ಹೇಳಿದರು.
ಎ ಹರ್ಷ ನಿರ್ದೇಶನದ ಅಂಜನಿಪುತ್ರ ಚಿತ್ರದ ಚಿತ್ರೀಕರಣದಲ್ಲಿ ನಾನು ಹೆಚ್ಚು ಸಂತೋಷದಿಂದ ಪಾಲ್ಗೊಂಡಿದ್ದೇನೆ. ಸ್ಯಾಂಡಲ್ ವುಡ್ ನ ನನ್ನ ಎರಡನೇ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜತೆಗೆ ಅಭಿನಯಿಸುವ ಅವಕಾಶ ಪಡೆದಿದ್ದೇನೆ ಎಂದರು. ಪುನೀತ್ ರಾಜಕುಮಾರ್ ಓರ್ವ ಸ್ಟಾರ್ ನಟ. ಸೆಟ್ ನಲ್ಲಿ ಸಹ ಕಲಾವಿದರೊಂದಿಗೆ ಹೆಚ್ಚು ಆತ್ಮೀಯವಾಗಿ ಬೆರೆಯುತ್ತಾರೆ. ಅವರಿಂದ ನಾನು ಹೆಚ್ಚು ಕಲಿತಿದ್ದೇನೆ ಎಂದು ಹೇಳಿದರು.
ನಿರ್ದೇಶಕ ಎ ಹರ್ಷ ಸೆಟ್ ನಲ್ಲಿ ನನ್ನನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದರು. ನಾನು ಅವರನ್ನು ಸಾಕಷ್ಟು ಗೋಳು ಹುಯ್ದುಕೊಂಡಿದ್ದೇನೆ. ಅವರ ಬದ್ಧತೆ ನನಗೆ ಹೆಚ್ಚು ಇಷ್ಟ. ಹರ್ಷ ಚೆನ್ನಾಗಿ ಕೆಲಸ ಮಾಡುತ್ತಾರೆ, ಜತೆಗೆ ಹಾಗೆ ಕಲಾವಿದರಿಂದ ಕೆಲಸವನ್ನು ಚೆನ್ನಾಗಿ ಪಡೆಯುತ್ತಾರೆ ಎಂದು ರಶ್ಮಿಕಾ ಹೇಳಿದರು.