ಫೇಸ್ ಬುಕ್ ಲೈವ್ ನಲ್ಲಿ ರಾಜ್ ಕುಮಾರ್ ಸೋದರರು!
ಬೆಂಗಳೂರು: ಕನ್ನಡದ ವರನಟ ಡಾ. ರಾಜ್ ಅವರ ಪುತ್ರರಾದ ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಇದೇ ಮೊದಲ ಬಾರಿ ಫೇಸ್ ಬುಕ್ ಲೈವ್ ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಗೂ ಪವರ್ ಸ್ಟಾರ್ ಪುನೀತ್ ಇಬ್ಬರೂ ಅಭಿಮಾನಿಗಳ ಪ್ರಶ್ನೆಗಳಿಗೆ ಪಟ ಪಟನೆ ಉತ್ತರಿಸಿದ್ದಾರೆ.
ಈ ವೇಳೆ ಶಿವರಾಜ್ ಕುಮಾರ್ "ನಾವಿಬ್ಬರೂ (ಶಿವಣ್ಣ ಹಾಗೂ ಪುನೀತ್) ಒಟ್ಟಿಗೆ ಚಿತ್ರವೊಂದರಲ್ಲಿ ನಟಿಸಲಿದ್ದೇವೆ" ಎಂದಿದ್ದಾರೆ, ಇದಾಗಲೇ ಅವರಿಬ್ಬರೂ ನಟಿಸುವ ಚಿತ್ರದ ಕಥೆಗೆ ಶಿವರಾಜ್ ಕುಮಾರ್ ಓಕೆ ಹೇಳಿದ್ದಾರೆ. ಪುನೀತ್ ಅವರ ಒಪ್ಪಿಗೆಗೆ ಕಾಯುತ್ತಿದ್ದಾರೆ ಎಂದರು.
ಇದೇ 21ರಂದು ಬಿಡುಗಡೆಯಾಗುತ್ತಿರುವ ಪುನೀತ್ ಅಭಿನಯದ 'ಅಂಜನಿಪುತ್ರ' ಚಿತ್ರ ಬಹುನಿರೀಖ್ಷೆ ಹುಟ್ಟಿಸಿರುವ ಈ ಸಮಯದಲ್ಲೇ ಇಬ್ಬರು ಸೋದರರೂ ಒಟ್ಟಿಗೆ ಲೈವ್ ಬಂದಿದ್ದದ್ದು ಅವರ ಅಭಿಮಾನಿಗಳಿಗೆ ಹಿಡಿಸಲಾರದ ಸಂತಸ ತಂದಿದೆ. ಶಿವರಾಜ್ ಕುಮಾರ್ ಅವರ ಬಹುನಿರೀಕ್ಷಿತ `ಟಗರು’ ಚಿತ್ರದ ಬಗ್ಗೆ ಪುನೀತ್ ಸಹ ಅತ್ಯಂತ ಮುಕ್ತವಾಗಿ ಮಾತನಾಡಿದ್ದಾರೆ. ಡಿ. 23ರಂದು 'ಟಗರು' ಚಿತ್ರದ ಆಡಿಯೋ ಬಿಡುಗಡೆಯಾಗುತ್ತಿರುವುದಾಗಿ ಶಿವರಾಜ್ ಕುಮಾರ್ ಇದೇ ಸಮಯದಲ್ಲಿ ಘೋಷಿಸಿದರು.
'ಉಪೇಂದ್ರ ನಿರ್ದೇಶನದಲ್ಲಿ ಮತ್ತೆ ನಟಿಸುತ್ತೀರಾ' ಎನ್ನುವ ಅಭಿಮಾನಿಯೊಬ್ಬರ ಪ್ರಶ್ನೆಗೆ ಶಿವರಾಜ್ ಕುಮಾರ್ ಉತ್ತರಿಸಿದ್ದು, "ಖಂಡಿತಾ ನಟಿಸುತ್ತೇನೆ. ಅವರ ನಿರ್ದೇಶನದ ಚಿತ್ರದಲ್ಲಿ ನಟಿಸಿ ಇದಾಗಲೇ ಇಪ್ಪತ್ತೆರಡು ವರ್ಷಗಳಾದವು. ಅವರು ಸದ್ಯ ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಅವರ ಪಕ್ಷಕ್ಕೆ ಆಲ್ ದಿ ಬೆಸ್ಟ್!" ಎಂದಿದ್ದಾರೆ.