ಅನುಷ್ಕಾ ಶರ್ಮ, ಪ್ರಿಯಾಂಕಾ ಚೋಪ್ರಾ, ಚಿತ್ರಾಂಗದಾ ಸಿಂಗ್ ಮೊದಲಾದ ಬಾಲಿವುಡ್ ನಟಿಯರು ಈಗಾಗಲೇ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಕಿರು ಚಿತ್ರಗಳ ಮೂಲಕ ಕನ್ನಡದಲ್ಲಿ ಶೃತಿ ಹರಿಹರನ್ ಮತ್ತು ರಚಿತಾ ರಾಮ್ ಕೂಡ ನಿರ್ಮಾಣಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇದೀಗ ಕನ್ನಡದಲ್ಲಿ ಅವರ ಸಾಲಿಗೆ ಹೊಸ ಸೇರ್ಪಡೆ ಶರ್ಮಿಳಾ ಮಂಡ್ರೆ. ಶರ್ಮಿಳಾ ಮಂಡ್ರೆ ಪ್ರೊಡಕ್ಷನ್ಸ್ ಎಂದು ಪ್ರೊಡಕ್ಷನ್ ಹೌಸ್ ಗೆ ಹೆಸರಿಡಲಿದ್ದು ಮುಂದಿನ ವರ್ಷ ಪ್ರಾಜೆಕ್ಟ್ ಗಳ ನಿರ್ಮಾಣ ಆರಂಭಿಸಲಿದ್ದಾರೆ.
ಸಾಜಿನಿ ಚಿತ್ರದ ಮೂಲಕ ಕನ್ನಡದಲ್ಲಿ ಅಭಿನಯ ಆರಂಭಿಸಿದ ಶರ್ಮಿಳಾ ಮಂಡ್ರೆ ಹೆಚ್ಚಿನ ಚಿತ್ರಗಳನ್ನು ಕನ್ನಡದಲ್ಲಿ ಮಾಡಿದರೂ, ತಮಿಳು ಮತ್ತು ತೆಲುಗಿನಲ್ಲಿ ಕೂಡ ಅಭಿನಯಿಸಿದ್ದಾರೆ. ಈ ವರ್ಷ ಬಾಲಿವುಡ್ ನಲ್ಲಿ ಕಥಾ ಎಂಬ ಚಿತ್ರದಲ್ಲಿ ಅಭಿನಯಿಸಿದ್ದು ಅದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ನಿರ್ಮಾಣದ ಜೊತೆ ಅವರ ಸಹಯೋಗ ಬಹಳ ಹಿಂದಿನಿಂದಲೇ ಇದೆ. ಅವರ ತಂದೆ ದಯಾನಂದ ಮಂಡ್ರೆ ಸ್ಯಾಂಡಲ್ ವುಡ್ ನಲ್ಲಿ ಹೆಸರು ಪಡೆದ ವಿತರಕರಾಗಿದ್ದು, ಶರ್ಮಿಳಾ ಅವರ ತಾತ ಮತ್ತು ಮಾವ ಕೂಡ ಚಲನಚಿತ್ರ ನಿರ್ಮಾಪಕರಾಗಿದ್ದರು.
ಚಿತ್ರಗಳ ನಿರ್ಮಾಣದ ಬಗ್ಗೆ ಕೇಳಿಕೊಂಡು ಬೆಳೆದವಳು ನಾನು. ತಳಮಟ್ಟದಿಂದಲೇ ನಾನು ನಿರ್ಮಾಣದ ಬಗ್ಗೆ ಕಲಿಯಬೇಕಾಗಿಲ್ಲ. ತಲೆಮಾರುಗಳಿಂದ ನಮ್ಮ ಕುಟುಂಬದಲ್ಲಿರುವ ಈ ವೃತ್ತಿಯನ್ನು ನಾನು ಮುಂದುವರಿಸಿಕೊಂಡು ಹೋಗಲು ಇಚ್ಛಿಸುತ್ತೇನೆ. ನನ್ನ ಕುಟುಂಬದ ಬೆಂಬಲ ನನಗಿದೆ. ಚಿತ್ರ ನಿರ್ಮಾಣ ಮತ್ತು ವಿತರಣೆ ನಮ್ಮ ಕುಟುಂಬದವರಿಗೆ ಗೊತ್ತಿದೆ. ಸರಿಯಾದ ಸಮಯಕ್ಕೆ ನಾನು ಈ ತೀರ್ಮಾನ ತೆಗೆದುಕೊಂಡಿದ್ದೇನೆ ಎನ್ನುತ್ತಾರೆ ಶರ್ಮಿಳಾ.
ನನ್ನ ಬ್ಯಾನರ್ ನಡಿ ಉತ್ತಮ ಚಿತ್ರಗಳನ್ನು ನಿರ್ಮಿಸುವ ಆಕಾಂಕ್ಷೆ ಹೊಂದಿದ್ದೇನೆ, ನಾನು ತಯಾರಿಸುವ ಚಿತ್ರಗಳಲ್ಲೆಲ್ಲ ನಟಿಸುವ ಆಸೆ ನನಗಿಲ್ಲ. ಹೊಸಬರನ್ನು ಹಾಕಿಕೊಂಡು ಚಿತ್ರ ನಿರ್ಮಿಸುವುದು ನನ್ನ ಉದ್ದೇಶವಾಗಿದೆ ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics