ಪ್ರಶಸ್ತಿ ಸ್ವೀಕರಿಸಿದ ಖುಷಿಯಲ್ಲಿ ದೇವ್ ಪಟೇಲ್
ಲಂಡನ್: ಲಯನ್ ಚಿತ್ರದ ಅಭಿನಯಕ್ಕಾಗಿ ಭಾರತೀಯ ಮೂಲದ ಬ್ರಿಟಿಷ್ ನಟ ದೇವ್ ಪಟೇಲ್ ಗೆ ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಅಂಡ್ ಟೆಲಿವಿಷನ್ ಆರ್ಟ್ಸ್ (ಬಿಎಎಫ್ ಟಿಎಎ) ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿದೆ. ಭಾರತೀಯ ಹುಡುಗನ ಕಥೆಯಾಧರಿಸಿದ ಚಿತ್ರ ಲಯನ್ ಆಗಿದ್ದು ಅತ್ಯುತ್ತಮ ಅಳವಡಿತ ಚಿತ್ರಕಥೆ ಪ್ರಶಸ್ತಿ ಕೂಡ ಇದಕ್ಕೆ ಸಿಕ್ಕಿದೆ.
70ನೇ ಬಿಎಎಫ್ ಟಿಎ ಪ್ರಶಸ್ತಿ ವಿಜೇತರನ್ನು ಲಂಡನ್ ನ ರಾಯಲ್ ಅಲ್ಬರ್ಟ್ ಸಭಾಂಗಣದಲ್ಲಿ ಘೋಷಿಸಲಾಯಿತು.
ಸ್ಲಮ್ ಡಾಗ್ ಮಿಲಿಯನೇರ್ ಖ್ಯಾತಿಯ ದೇವ್ ಪಟೇಲ್ ಹಾಲಿವುಡ್ ನಟ ಆರನ್ ಟೇಲರ್ ಜಾನ್ಸನ್ (ನಾಕ್ಚುರ್ನಲ್ ಅನಿಮಲ್ಸ್ ಚಿತ್ರ), ಜೆಫ್ ಬ್ರಿಡ್ಜಸ್(ಹೆಲ್ಲ್ ಆರ್ ಹೈ ವಾಟರ್), ಹುಗ್ ಗ್ರಾಂಟ್(ಫ್ಲಾರೆನ್ಸ್ ಫಾಸ್ಟರ್ ಜೆಂಕಿನ್ಸ್) ಮತ್ತು ಮಹೆರ್ಶಲಾ ಆಲಿ(ಮೂನ್ ಲೈಟ್) ಜೊತೆ ಪ್ರಶಸ್ತಿಗೆ ನಾಮಾಂಕಿತರಾಗಿದ್ದರು.
ದೇವ್ ಪಟೇಲ್ ಇತ್ತೀಚೆಗೆ 74ನೇ ಗೋಲ್ಡನ್ ಗ್ಲೋಬ್ಸ್ ಅವಾರ್ಡ್ ನಲ್ಲಿ ಉತ್ತಮ ಪೋಷಕ ನಟ ವಿಭಾಗದಲ್ಲಿ ಆರನ್ ಟೇಲರ್ ಜಾನ್ಸನ್ ವಿರುದ್ಧ ಸೋತಿದ್ದರು. ಆದರೆ ಇದೀಗ ಬಿಎಎಫ್ ಟಿಎಎ ಪ್ರಶಸ್ತಿ ಸಿಕ್ಕಿರುವುದು ದೇವ್ ಪಟೇಲ್ ಗೆ ಆಸ್ಕರ್ ಪ್ರಶಸ್ತಿಯ ಕನಸನ್ನು ಗರಿಗೆದರಿಸಿದೆ.
ಪ್ರಶಸ್ತಿ ಪಡೆದ ಸಂದರ್ಭದಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪ್ರಶಸ್ತಿ ಗಳಿಸುವುದು ವಿಸ್ಮಯ ಮತ್ತು ಅದ್ಭುತ ಗಳಿಗೆ ಎಂದು ನಾನು ಹೇಳುವುದು ಸುಳ್ಳಲ್ಲ. ಪ್ರಶಸ್ತಿಗಳು ಒಬ್ಬರ ವೃತ್ತಿ ಜೀವನವನ್ನು ಬದಲಾಯಿಸುತ್ತದೆ. ನೀವು ಗುರುತಿಸಿಕೊಳ್ಳುತ್ತೀರಿ ಎಂದು ಹೇಳಿದರು.
ನನಗೆ ಗೋಲ್ಡನ್ ಪ್ರಶಸ್ತಿ ಬರುತ್ತಿದೆ ಎಂದು ಮನಸ್ಸಿನಲ್ಲಿಟ್ಟುಕೊಂಡು ಈ ಸಿನಿಮಾವನ್ನು ಒಪ್ಪಿಕೊಂಡಿರಲಿಲ್ಲ ಎಂದು ಆನಂದದಿಂದ ದೇವ್ ಪಟೇಲ್ ಹೇಳಿದರು.
ಗರ್ತ್ ಡೇವಿಸ್ ನಿರ್ದೇಶನದ ಲಯನ್ ಚಿತ್ರ ಸರೂ ಬ್ರೈರ್ಲಿಯವರ ಜನಪ್ರಿಯ ಆತ್ಮಚರಿತ್ರೆ '' ಎ ಲಾಂಗ್ ವೆ ಹೋಮ್'' ನ್ನು ಆಧರಿಸಿದ ಚಿತ್ರವಾಗಿದೆ.
ಭಾರತದ ಬಾಲಕನೊಬ್ಬ ರೈಲಿನಲ್ಲಿ ಪ್ರಯಾಣಿಸುವಾಗ ನಿದ್ದೆಗೆ ಜಾರಿ ತಾನು ಇಳಿಯಬೇಕಾದ ಸ್ಟೇಷನ್ ನಲ್ಲಿ ಇಳಿಯದೆ ಮುಂದೆ ಸಾಗುತ್ತಾನೆ. ಎಚ್ಚರವಾಗಿ ನೋಡಿದಾಗ ಗೊತ್ತಾಗುತ್ತದೆ ತಾನು ಅಪರಿಚಿತ ಪ್ರದೇಶಕ್ಕೆ ಹೋಗಿದ್ದೇನೆ ಎಂದು ಅವನಿಗೆ ಅಲ್ಲಿನ ಭಾಷೆಯೂ ಮಾತನಾಡಲು ಬರುವುದಿಲ್ಲ. ಅನೇಕ ಅನುಭವಗಳು ಅಲ್ಲಿ ಅವನಿಗಾಗುತ್ತವೆ. ಕೊನೆಗೆ ಆಸ್ಟ್ರೇಲಿಯಾದ ದಂಪತಿ ಬಾಲಕನನ್ನು ದತ್ತು ಪಡೆಯುತ್ತಾರೆ. ಅನೇಕ ವರ್ಷಗಳು ಕಳೆದ ನಂತರ ತನ್ನ ಕುಟುಂಬವನ್ನು ಹುಡುಕಿಕೊಂಡು ಹೋಗುವುದೇ ಲಯನ್ ಚಿತ್ರದ ಕಥೆ.
ಅತ್ಯುತ್ತಮ ಅಳವಡಿತ ಚಿತ್ರಕಥೆ ವಿಭಾಗದಲ್ಲಿ ಲಯನ್ ಚಿತ್ರ ಅರೈವಲ್, ಹಕ್ಸಾವ್ ರಿಡ್ಜ್, ಹಿಡ್ಡನ್ ಫಿಗರ್ಸ್ ಮತ್ತು ನಾಕ್ಚುರ್ನಲ್ ಅನಿಮಲ್ಸ್ ಚಿತ್ರಗಳ ಜೊತೆ ಸ್ಪರ್ಧೆಯೊಡ್ಡಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos