ಬೆಂಗಳೂರು: ಸುದೀಪ್ ನಟಿಸುತ್ತಿರುವ ಸಾಲು ಸಾಲು ಸಿನೆಮಾಗಳನ್ನು ಗಮನಿಸಿದರೆ, ೨೦೧೭ ಅವರಿಗೆ ರಿಮೇಕ್ ಮುಕ್ತ ವರ್ಷವಾಗಲಿದೆ ಎಂಬ ಗುಮಾನಿ ಮೂಡುತ್ತದೆ. 'ರಿಮೇಕ್ ಗಳ ಹೀರೊ' ಎಂಬ ಆಪಾದನೆ ಹೊತ್ತಿರುವ ನಟ ಈಗ ಎಲ್ಲ ಒರಿಜಿನಲ್ ಕಥೆಗಳನ್ನುಒಪ್ಪಿಕೊಳ್ಳುವ ಮೂಲಕ ಟೀಕಾಕಾರರ ಬಾಯಿಮುಚ್ಚಿಸಲಿದ್ದಾರೆಯೇ?
ವರ್ಷದ ಪ್ರಾರಂಭಕ್ಕೆ ಎಸ್ ಕೃಷ್ಣ ನಿರ್ದೇಶನದ 'ಹೆಬ್ಬುಲಿ' ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ. ಜನವರಿ ೨೧ ರಿಂದ 'ದ ವಿಲನ್' ಸಿನೆಮಾದ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಸಿನೆಮಾವನ್ನು ಪ್ರೇಮ್ ನಿರ್ದೇಶಿಸುತ್ತಿದ್ದು, ಶಿವರಾಜ್ ಕುಮಾರ್ ಜೊತೆಗೆ ಸುದೀಪ್ ನಟಿಸಲಿದ್ದಾರೆ. ನಂತರ ರಕ್ಷಿತ್ ಶೆಟ್ಟಿ ಜೊತೆಗೆ 'ಥಗ್ಸ್ ಆಫ್ ಮಾಲ್ಗುಡಿ' ಸಿನೆಮಾ ಸರತಿಯಲ್ಲಿದೆ.
ನಂತರ ಅವರು ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ನಟಿಸಲಿದ್ದಾರೆ. ಹೊಸ ಪೀಳಿಗೆಯ ನಿರ್ದೇಶಕರ ಸಿನೆಮಾಗಳಲ್ಲಿ ನಟಿಸಲು ಆಸಕ್ತಿ ತೋರಿದ್ದಾರೆ ಸುದೀಪ್. ಈ ವಿಷಯವನ್ನು ರಿಷಬ್ ಶೆಟ್ಟಿ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಧೃಢೀಕರಿಸಿದ್ದಾರೆ.