ಅಲ್ಲಮ ಸಿನೆಮಾದಲ್ಲಿ ನಟ ಧನಂಜಯ್ ಮತ್ತು ಮೇಘನಾ ರಾಜ್
ಬೆಂಗಳೂರು: ಹಿರಿಯ ನಿರ್ದೇಶಕ ನಾಗಾಭರಣ ನಿರ್ದೇಶನದ 'ಅಲ್ಲಮ' ಬಿಡುಗಡೆಗೆ ಸಿದ್ಧವಾಗಿದೆ. ಕಮರ್ಷಿಯಲ್ ಮತ್ತು ಕಲಾತ್ಮಕ ಸಿನೆಮಾಗಳನ್ನು ಮಾಡಿ, ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿರುವ ನಿರ್ದೇಶಕರ ನೂತನ ಸಿನೆಮಾ ಗಣರಾಜ್ಯೋತ್ಸವ ದಿನದಂದು ಬಿಡುಗಡೆಯಾಗಲಿದೆ.
ಸಂತ-ವಚನಕಾರ ಅಲ್ಲಮಪ್ರಭು ಅವರ ಜೀವನಾಧಾರಿತ ಈ ಸಿನೆಮಾದ ಸ್ಕ್ರಿಪ್ಟ್ ರಚನೆ ಮಾಡುವುದಕ್ಕೆ ಮೂರೂ ವರ್ಷ ಹಿಡಿಯಿತು ಎಂದು ತಿಳಿಸುವ ನಿರ್ದೇಶಕ "ಸ್ಕ್ರಿಪ್ಟ್ ಅಂತಿಮಗೊಳಿಸುವುದಕ್ಕೂ ಮುಂಚೆ ನಾನು ೫೦ ಬಾರಿ ತಿದ್ದಿದೆ. ಅಲ್ಲಮಪ್ರಭ ನಮ್ಮ ಸಾಹಿತ್ಯ ಮತ್ತು ಇತಿಹಾಸದ ಭಾಗ ಆದುದರಿಂದ ಅವನ ಜೀವನದ ಪ್ರಮುಖ ಘಟನೆಗಳನ್ನು ತಪ್ಪಿಸುವಂತಿಲ್ಲ. ಈ ಸಿನೆಮಾ ಅಲ್ಲಮನ ಬಗ್ಗೆ ಮಾತ್ರ ಆಗಿರದೆ ಅಕ್ಕ ಮಹಾದೇವಿ, ಬಸವಣ್ಣನವರ ಚಿತ್ರ ಕೂಡ. ವಿಶಾಲವಾದ ಈ ವಿಷಯವನ್ನು ಇಲ್ಲಿಗೆ ಅಳವಡಿಸಲು ಸವಾಲಾಗಿತ್ತು, ಆದರೆ ನಾನು ಯಶಸ್ವಿಯಾಗಿದ್ದೇನೆ. ಅಲ್ಲಮ್ಮ ಮತ್ತು ಇತರ ವಚನಕಾರರ ಬಗ್ಗೆ ಅಧ್ಯಯನ ಮಾಡಿದ್ದು ಐದು ಪಿ ಎಚ್ ಡಿ ಗಳಿಸಿದಂತೆ" ಎನ್ನುತ್ತಾರೆ.
ಪ್ರತಿ ಸಿನೆಮಾ ತಮಗೆ ಪ್ರಯೋಗವಿದ್ದಂತೆ ಎಂದು ತಿಳಿಸುವ ನಿರ್ದೇಶಕ, ಗತಿಸಿದ ಅತಿ ಹಿಂದಿನ ಯುಗವನ್ನು ಮರುಕಳಿಸುವುದು ಬಹಳ ತ್ರಾಸದಾಯಕ ಕೆಲಸ ಎನ್ನುತ್ತಾರೆ. "ಇತಿಹಾಸ ಆಧಾರಿತ ವಿಷಯವನ್ನು ಕೇವಲ ಸಂಶೋಧನೆಯಿಂದ ಮೂಡಿಸಲು ಸಾಧ್ಯವಾಗುವುದಿಲ್ಲ, ಅಂದಿನ ಕಾಲಘಟ್ಟವನ್ನು ಚಿತ್ರಿಸಬೇಕು. ಅಧೃಷ್ಟವಶಾತ್ ನನ್ನ ಜೊತೆಗೆ ಕಲಾ ನಿರ್ದೇಶಕ ಶಶಿಧರ್ ಅಡಪ, ವಸ್ತ್ರ ವಿನ್ಯಾಸಕಿ ನಾಗಿಣಿ ಭರಣ ಇದ್ದರು. ಅವರು ಎಲ್ಲವನ್ನು ಅಥೆಂಟಿಕ್ ಆಗಿ ಕಾಣಲು ಸಹಕರಿಸಿದ್ದಾರೆ. ಆದುದರಿಂದ ಕರ್ನಾಟಕದ ಸಂಸ್ಕೃತಿ ನಿಮಗೆ ಉತ್ತಮವಾಗಿ ಕಾಣಸಿಗಲಿದೆ" ಎನ್ನುತ್ತಾರೆ ನಾಗಾಭರಣ.
ಅಲ್ಲಮಪ್ರಭು ಅವರ ವಚನಗಳಿಂದ ಭಾರಿ ಪ್ರಭಾವಿತನಾಗಿರುವುದಾಗಿ ತಿಳಿಸುವ ನಾಗಾಭರಣ "ಅವರ ಅದ್ಭುತ ಸಾಹಿತ್ಯದ ಜೊತೆಗೆ ಅವರ ಜೀವನ ಪ್ರಯಾಣ ಬಹಳ ಆಸಕ್ತಿದಾಯಕ. ಅವರ ಜೀವನ ಮತ್ತು ಸಾಹಿತ್ಯ ಇಂದಿಗೂ ಅನ್ವಯ" ಎನ್ನುತ್ತಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos