ನವದೆಹಲಿ: ಸ್ಲಮ್ ಡಾಗ್ ಮಿಲೇನಿಯರ್ ಖ್ಯಾತಿಯ ಭಾರತ ಮೂಲದ ಬ್ರಿಟೀಷ್ ನಟ ದೇವ್ ಪಟೇಲ್ ಹೆಸರು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.
ಲಯನ್ ಚಿತ್ರದ ನಟನೆಗಾಗಿ ಆಸ್ಕರ್ ಗೆ ದೇವ್ ಪಟೇಲ್ ಹೆಸರು ನಾಮನಿರ್ದೇಶನಗೊಂಡಿದ್ದು, ಫೆ.26 ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಮಹೆರ್ಶಲಾ ಅಲಿ (ಮೂನ್ ಲೈಟ್ ಚಿತ್ರ), ಜೆಫ್ ಬ್ರಿಡ್ಜಸ್ (ಹೆಲ್ ಆರ್ ಹೈ ವಾಟರ್ ಚಿತ್ರ) ಹಾಗೂ ಮೈಕೆಲ್ ಶಾನನ್ (ನಾಕ್ಟಾರ್ನಲ್ ಅನಿಮಲ್ಸ್ ಚಿತ್ರ) ಆಸ್ಕರ್ ಗೆ ನಾಮನಿರ್ದೇಶನಗೊಂಡಿರುವ ಇತರ ನಟರಾಗಿದ್ದಾರೆ.
ದೇವ್ ಪಟೇಲ್ ಅಭಿನಯಿಸಿರುವ ಲಯನ್ ಚಿತ್ರ ಸಾರೂ ಬೇರ್ಲೆ ಅವರ ಆತ್ಮಚರಿತ್ರೆ 'ಎ ಲಾಂಗ್ ವೇ ಹೋಮ್' ಆಧಾರಿತ ಚಿತ್ರಕತೆ ಇದಾಗಿದೆ. 74 ನೇ ಗೋಲ್ಡನ್ ಗ್ಲೋಬ್ಸ್ ನಲ್ಲಿ ದೇವ್ ಪಟೇಲ್ ಗೆ ಸಹನಟನ ವಿಭಾಗದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಕೈತಪ್ಪಿತ್ತು. ಗಾರ್ತ್ ಡೇವಿಸ್ ನಿರ್ದೇಶನದ ಲಯನ್ ಚಿತ್ರ ಭಾರತದಲ್ಲಿ ಫೆ..24 ರಂದು ಬಿಡುಗಡೆಯಾಗಲಿದೆ.