ಸಿನಿಮಾ ಸುದ್ದಿ

'ದಂಡುಪಾಳ್ಯ' ನಿರ್ದೇಶಕರಿಂದ ಮತ್ತೊಂದು ನೈಜ ಘಟನೆಯ ಸಿನೆಮಾ

Guruprasad Narayana
ಬೆಂಗಳೂರು: ನೈಜ ಕಥಾನಕವುಳ್ಳ ಕಷ್ಟದ ವಿಷಯಗಳನ್ನು ದೃಶ್ಯ ಮಾಧ್ಯಮದಲ್ಲಿ ಕಟ್ಟಿಕೊಡುವುದೆಂದರೆ ನಿರ್ದೇಶಕ ಶ್ರೀನಿವಾಸ್ ರಾಜು ಅವರಿಗೆ ಹೆಚ್ಚು ಪ್ರೀತಿ. ಈಗ ದಂಡುಪಾಳ್ಯ ಸರಣಿ ಸಿನೆಮಾಗಳ ನಂತರ ರಾಜು ಮತ್ತೊಂದು ಸೂಕ್ಷ್ಮ ವಿಷಯದ ಬೆನ್ನು ಹತ್ತಿದ್ದಾರೆ. ಇದು ಕಂಚಿ ಪೀಠದ ಸ್ವಾಮೀಜಿ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಅವರ ಬಂಧನ ಮತ್ತು ನಂತರ ನಡೆದ ಘಟನೆಗಳ ಕುರಿತಾದದ್ದು.
ಇದು ಅವರ ಬ್ಯಾನರ್ ನಲ್ಲಿಯೇ ಮೂಡಿ ಬರುತ್ತಿದ್ದು, ಶೀರ್ಷಿಕೆ 'ಆಚಾರ್ಯ ಅರೆಸ್ಟ್' ಎಂದಿದ್ದರೆ, ಅಡಿ ಶೀರ್ಷಿಕೆ 'ಆನ್ ಇನ್ಸಲ್ಟ್ ಟು ಎವೆರಿ ಹಿಂದೂ' (ಪ್ರತಿ ಹಿಂದೂವಿಗೂ ಅವಮಾನ) ಎಂದಿರಲಿದೆಯಂತೆ. ಇದು ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಮೂಡಿಬರಲಿದೆ. 
೨೦೦೪ರಲ್ಲಿ ಕಂಚಿ ಮಠದ ವ್ಯವಸ್ಥಾಪಕ ಶಂಕರರಾಮನ್ ಅವರ ಕೊಲೆಯ ನಂತರ ಸ್ವಾಮಿಗಳ ಬಂಧನ ಮತ್ತಿತರ ಘಟನೆಗಳ ಸುತ್ತ ಈ ಚಿತ್ರ ಸುತ್ತಲಿದೆ ಎನ್ನುವ ರಾಜು "ಇದಕ್ಕೆ ಇದ್ದ ರಾಜಕೀಯ ಕೋನ, ಕಟ್ಟುಕಥೆಗಳು, ವದಂತಿಗಳು ಎಲ್ಲವನ್ನು ಚರ್ಚಿಸಲಿದೆ ಸಿನೆಮಾ" ಎನ್ನುತ್ತಾರೆ. 
ಹಾಗೆಯೇ ಸ್ವಾಮೀಜಿ ವಿರೋಧಿಸುತ್ತಿದ್ದ ಧಾರ್ಮಿಕ ಪಿತೂರಿ ಮತ್ತು ಮತಾಂತರದ ಸುತ್ತಲೂ ಇದು ಸುತ್ತಲಿದೆ ಎನ್ನುವ ರಾಜು "ಇದು ರಾಷ್ಟ್ರೀಯ ಸಮಸ್ಯೆ ಮತ್ತು ಈಗ ಈ ಪ್ರಕರಣ ಮುಗಿದಿರುವುದರಿಂದ ಆಗ ನಡೆದಿದ್ದನ್ನೆಲ್ಲ ತಿಳಿಸಬೇಕು ಎಂದು ನನಗೆ ಅನಿಸಿತು" ಎನ್ನುವ ರಾಜು ಎರಡು ವರ್ಷಗಳಿಂದ ಮಾಹಿತಿ ಕಲೆ ಹಾಕುತ್ತಿರುವುದಾಗಿ ಹೇಳಿದ್ದಾರೆ. 
"ಶಂಕರರಾಮನ್ ಅವರನ್ನು ಕೊಂದ ತಂಡದ ಭಾಗವಾಗಿದ್ದ ಎಂದು ಆರೋಪಿಸಲಾಗಿದ್ದ ವ್ಯಕ್ಯಿಯನ್ನು ಕೂಡ ನಾನು ಭೇಟಿ ಮಾಡಿದ್ದೇನೆ. ಈಗ ಅವರ ಕಥೆ ಕೇಳಲು ಜಯೇಂದ್ರ ಸರಸ್ವತಿಯವರನ್ನೇ ಭೇಟಿ ಮಾಡಲಿದ್ದೇನೆ. ಲೌಖಿಕವನ್ನು ತ್ಯಜಿಸಿದ್ದ ಹಿರಿಯ ಪೂಜಾರಿಯೊಬ್ಬರನ್ನು ಈ ಕೊಲೆ ಪ್ರಕರಣದಲ್ಲಿ ಎಳೆದಿದ್ದೇಕೆ ಮತ್ತು ಇತರ ವಿವಾದಗಳು ನನಗೆ ಕುತೂಹಲ ತರಿಸಿದವು ಮತ್ತು ಅದಕ್ಕೆ ಇದರಲ್ಲಿ ತೊಡಗಿಸಿಕೊಂಡೆ" ಎನ್ನುವ ನಿರ್ದೇಶಕ ಈಗ ತಾರಾಗಣಕ್ಕಾಗಿ ನಟರ ಹುಡುಕಾಟಕ್ಕೆ ತೊಡಗಿದ್ದಾರೆ.
SCROLL FOR NEXT