ಚೆನ್ನೈ: ತಮಿಳುನಾಡು ಸರ್ಕಾರದ ದುಪ್ಪಟ್ಟು ತೆರಿಗೆ ವಿರೋಧಿಸಿ ಕಳೆದ ಸೋಮವಾರದಿಂದ ನಡೆಯುತ್ತಿದ್ದ ಅನಿರ್ಧಿಷ್ಟಾವಧಿ ಚಿತ್ರಮಂದಿರಗಳ ಬಂದ್ ಅನ್ನು ತಮಿಳು ಚಿತ್ರ ಮಂದಿರಗಳ ಮಾಲೀಕರ ಒಕ್ಕೂಟ ಗುರುವಾರ ಹಿಂಪಡೆದಿದೆ.
ಜಿಎಸ್ ಟಿ ಜೊತೆಗೆ ರಾಜ್ಯ ಸರ್ಕಾರ ಶೇ.30ರಷ್ಟು ಮುನ್ಸಿಪಲ್ ತೆರಿಗೆ ವಿಧಿಸುತ್ತಿರುವುದನ್ನು ವಿರೋಧಿಸಿ ಚಲನಚಿತ್ರ ಮಂದಿರಗಳ ಮಾಲೀಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಹಿಂಪಡೆದಿದ್ದು, ನಾಳೆಯಿಂದ ಎಲ್ಲಾ ಚಿತ್ರಮಂದಿರಗಳು ಕಾರ್ಯನಿರ್ವಹಿಸಲಿವೆ ಎಂದು ಚಿತ್ರ ಮಂದಿರಗಳ ಮಾಲೀಕರ ಒಕ್ಕೂಟದ ಅಧ್ಯಕ್ಷ ಅಬಿರಾಮ್ ರಾಮನಾಥನ್ ಅವರು ಹೇಳಿದ್ದಾರೆ.
ಸ್ಥಳೀಯ ಆಡಳಿತ ವಿಧಿಸುತ್ತಿರುವ ತೆರಿಗೆಯನ್ನು ಹಿಂಪಡೆಯಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಸಮಿತಿಯೊಂದನ್ನು ರಚಿಸುವುದಾಗಿ ತಿಳಿಸಿದ್ದು, ಆ ಸಮಿತಿಯಲ್ಲಿ ಸರ್ಕಾರದ ಎಂಟು ಪ್ರತಿನಿಧಿಗಳು ಹಾಗೂ ಚಿತ್ರಮಂದಿರಗಳ ಮಾಲೀಕರ ಒಕ್ಕೂಟದ 8 ಸದಸ್ಯರಿರಲಿದ್ದಾರೆ. ಈ ಸಮಿತಿ ಮುನ್ಸಿಪಲ್ ತೆರಿಗೆ ಬಗ್ಗೆ ಚರ್ಚಿಸಲಿದೆ ಎಂದು ಅಬಿರಾಮ್ ಅವರು ತಿಳಿಸಿದ್ದಾರೆ.
ಶೇ.30ರಷ್ಟು ಮುನ್ಸಿಪಲ್ ತೆರಿಗೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಅಬಿರಾಮ್ ರಾಮನಾಥನ್ ಅವರು ಮುಖ್ಯಮಂತ್ರಿ ಎಡಪಾಡಿ ಕೆ ಪಳನಿಸ್ವಾಮಿ ಹಾಗೂ ಹಣಕಾಸು ಸಚಿವ ಡಿ. ಜಯಕುಮಾರ್ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಸಿನಿಮಾ ಮಂದಿರಗಳಲ್ಲಿ ಜಿಎಸ್‌ಟಿ ಜೊತೆಗೆ ರು. 100ರ ಒಳಗಿನ ಟಿಕೆಟ್‌ಗಳಿಗೆ ಶೇ. 18ರಷ್ಟು ತೆರಿಗೆ ವಿಧಿಸಲಾಗುತ್ತದೆ. ರು. 100ಕ್ಕಿಂತ ಹೆಚ್ಚಿರುವ ಮಲ್ಟಿಪ್ಲೆಕ್ಸ್ ಟಿಕೆಟ್‌ಗಳಿಗೆ ಶೇ. 28ರಷ್ಟು ಜಿಎಸ್ ಟಿ ಜೊತೆಗೆ ಶೇ.30ರಷ್ಟು ಮುನ್ಸಿಪಲ್ ತೆರಿಗೆ ವಿಧಿಸಲಾಗುತ್ತದೆ.