ನವದೆಹಲಿ: ಅಸ್ಸಾಮಿ ಗಾಯಕಿ ಹಾಗೂ ನಟಿ ಬಿದಿಶಾ ಬರ್ಜಬಾರುವಾ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇತ್ತೀಚೆಗೆ ಬಿಡುಗಡೆಯಾದ ರಣ್ಬೀರ್ ಕಪೂರ್ ಅಭಿನಯದ ಜಗ್ಗಾ ಜಾಸೂಸ್ ಸಿನಿಮಾದಲ್ಲಿ ಬಿದಿಶಾ ನಟಿಸಿದ್ದರು. ಜುಲೈ 17 ಗುರಗಾವ್ ನ ನಿವಾಸದಲ್ಲಿ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಕೆಯ ಸಾವಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ,
ಆಕೆಯ ಸಂಬಂಧಿಕರ ಪ್ರಕಾರ ಬಿದಿಶಾ ವೈವಾಹಿಕ ಜೀವನದಲ್ಲಿ ಸಮಸ್ಯೆಯಿತ್ತು, ಪದೇ ಪದೇ ಗಂಡ ಹೆಂಡತಿ ಜಗಳ ಮಾಡಿಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ, ಐಪಿಸಿ ಸೆಕ್ಷನ್ 306 ರ ಅಡಿಯಲ್ಲಿ ಬಿದಿಶಾ ಪತಿ ವಿರುದ್ಧ ಆಕೆಯ ಸಂಬಂಧಿಕರು ದೂರು ದಾಖಲಿಸಿದ್ದಾರೆ ಎಂದು ಗುರ್ ಗಾವ್ ಪೊಲೀಸ್ ಪಿಆರ್ ಓ ರವೀಂದ್ರ ಕುಮಾರ್ ಹೇಳಿದ್ದಾರೆ.
ಪೊಲೀಸರು ಬಿದಿಶಾ ಸಾವಿನ ಪ್ರಕರಣದ ತನಿಖೆ ನಡೆಸುತ್ತಿದ್ದು, ಮರಣೋತ್ತರ ಪರೀಕ್ಷೆ ನಂತರ ಆಕೆಯ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.