ಸಿನಿಮಾ ಸುದ್ದಿ

'ರಾಜು ಕನ್ನಡ ಮೀಡಿಯಂ' ವಿವಾದ: ನಾಯಕಿ ಪಾತ್ರಕ್ಕೆ ಡಬ್ಬಿಂಗ್ ಮಾಡಿಸದಂತೆ ನ್ಯಾಯಾಲಯ ಆದೇಶ

Manjula VN
ಬೆಂಗಳೂರು: ನಟಿ ಅವಂತಿಕಾ ಶೆಟ್ಟಿ ಅಭಿನಯದ ರಾಜು ಕನ್ನಡ ಮೀಡಿಯಂ ಚಿತ್ರದ ಡಬ್ಬಿಂಗ್ ವಿವಾದ ನ್ಯಾಯಾಲಯದ ಮೆಟ್ಟಿಲೇರಿದ್ದು, ಚಿತ್ರದ ನಾಯಕಿ ಪಾತ್ರದ ಧ್ವನಿಗೆ ಮೂರನೇ ವ್ಯಕ್ತಿಯಿಂದ ಡಬ್ಬಿಂಗ್ ಮಾಡಿಸದಂತೆ ಚಿತ್ರದ ನಿರ್ಮಾಪಕರಿಗೆ ಹೈಕೋರ್ಟ್ ಸೋಮವಾರ ಸೂಚನೆ ನೀಡಿದೆ. 
ಚಿತ್ರದ ಕರಾರು ಉಲ್ಲಂಘಿಸಿ ತಮ್ಮ ಪಾತ್ರಕ್ಕೆ ಬೇರೊಬ್ಬರಿಂದ ಡಬ್ಬಿಂಗ್ ಮಾಡಿಸಲಾಗುತ್ತಿದೆ ಎಂದು ಚಿತ್ರದ ನಿರ್ಮಾಪಕ ಸುರೇಶ್ ವಿರುದ್ಧ ನಟಿ ಅವಂತಿಕಾ ಶೆಟ್ಟಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅರವಿಂದ್ ಕುಮಾರ್ ಅವರಿದ್ದ ಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ. 
ವಿಚಾರಣೆ ವೇಳೆ ಅವಂತಿಕಾ ಶೆಟ್ಟಿ ಪರ ವಕೀಲರು ವಾದಿಸಿ, ಅರ್ಜಿದಾರರನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಂಡ ಸಂದರ್ಭದಲ್ಲಿ 14 ಲಕ್ಷ ಸಂಭಾವನೆ ನೀಡುವುದಾಗಿ ನಿರ್ಮಾಪಕರೊಂದಿಗೆ ಒಪ್ಪಂದವಾಗಿತ್ತು. ಚಿತ್ರೀಕರಣ ಅಂತಿಮ ಹಂತದಲ್ಲಿದ್ದು, ಡಬ್ಬಿಂಗ್ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಅರ್ಜಿದಾರರರ ಪಾತ್ರಕ್ಕೆ ಬೇರೊಬ್ಬರಿಂದ ಡಬ್ ಮಾಡಿಸಲು ನಿರ್ಮಾಪಕರು ಮುಂದಾಗಿದ್ದಾರೆ. ಇದು ಒಪ್ಪಂದದ ಅಂಶಗಳ ಉಲ್ಲಂಘನೆಯಾಗಿದೆ. ಇದನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಅಧೀನ ನ್ಯಾಯಾಲಯ ನಿರಾಕರಿಸಿದೆ. ಹೀಗಾಗಿ ಚಿತ್ರದ ಡಬ್ಬಿಂಗ್'ಗೆ ತಡೆ ನೀಡಬೇಕೆಂದು ಮನವಿ ಮಾಡಿದರು. 
ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಚಿತ್ರ ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈಗಾಗಲೇ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದು, ಆರೋಪಗಳ ಹಿನ್ನಲೆಯಲ್ಲಿ ಅವಂತಿಕಾ ಶೆಟ್ಟಿಯವರಿಂದ ಡಬ್ ಮಾಡಿಸಲು ನನದೆ ಇಷ್ಟವಿಲ್ಲ. ಆದರೆ, ನ್ಯಾಯಾಲಯದ ಆದೇಶವನ್ನು ಪಾಲಿಸಲೇಬೇಕು ಎಂದು ನಿರ್ದೇಶಕ ಸುರೇಶ್ ಅವರು ಹೇಳಿದ್ದಾರೆ. 
ಡಬ್ಬಿಂಗ್ ಕುರಿತ ನಿರ್ಧಾರ ಕೈಗೊಳ್ಳಲು ನನಗೆ ಕಾಲಾವಕಾಶ ಬೇಕು. ಚಿತ್ರದ ತಂಡ ನಿರ್ಧಾರ ಕೈಗೊಂಡ ಬಳಿಕವೇ ಕರ್ನಾಟಕ ಚಲನಚಿತ್ರ ಮಂಡಳಿ ಮುಂದೆ ಸಮಸ್ಯೆಯನ್ನು ಇಟ್ಟಿದ್ದೆವು. ಇದೀಗ ನಾನು ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದೇನೆ. ಶೀಘ್ರದಲ್ಲಿಯೇ ಚಲನಚಿತ್ರ ಮಂಡಳಿಗೆ ಭೇಟಿ ನೀಡಿ ಮುಂದಿನ ಕ್ರಮಗಳ ಕುರಿತಂತೆ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 
SCROLL FOR NEXT