ಬೆಂಗಳೂರು: ತಾಯಿಯ ಅಗಲಿಕೆಯಿಂದ ಸಂತಾಪದಲ್ಲಿದ್ದ ನಟ ಪುನೀತ್ ರಾಜಕುಮಾರ್ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ. ಈಗ ಅವರ ಮುಂದಿನ ಚಿತ್ರ 'ಅಂಜನಿಪುತ್ರ'ದ ಚಿತ್ರೀಕರಣಕ್ಕೆ ಜೂನ್ ೨೨ರಂದು ಹಿಂದಿರುಗಲಿದ್ದಾರೆ ಎಂದು ತಿಳಿಯಲಾಗಿದೆ.
ಪಾರ್ವತಮ್ಮ ರಾಜಕುಮಾರ್ ಅವರು ಅನಾರೋಗ್ಯದಿಂದ ಬಳಲುತ್ತಿರುವಾಗ ಅವರ ಶುಶ್ರುಷೆಗಾಗಿ ನಟ ಒಂದು ತಿಂಗಳ ಕಾಲ ಚಿತ್ರೀಕರಣವನ್ನು ಸೇರಿದಂತೆ ಎಲ್ಲ ಪೂರ್ವನಿಯೋಜಿತ ಕೆಲಸಗಳನ್ನು ಬದಿಗಿಟ್ಟಿದ್ದರು. ಪಾರ್ವತಮ್ಮನವರು ಮೇ ೩೧ ರಂದು ಕೊನೆಯುಸಿರೆಳೆದಿದ್ದರು.
ಎ ಹರ್ಷ ನಿರ್ದೇಶನದ 'ಅಂಜನಿಪುತ್ರ' ಈಗ ೫೦% ಚಿತ್ರೀಕರಣ ಮುಗಿಸಿದೆ. ಇತರ ಚಿತ್ರಗಳಿಗೆ ನೃತ್ಯನಿರ್ದೇಶನವನ್ನು ಕೂಡ ಮಾಡುವ ನಿರ್ದೇಶಕ ಸದ್ಯಕ್ಕೆ 'ಭರ್ಜರಿ' ಚಿತ್ರದ ಹಾಡುಗಳ ನೃತ್ಯ ಚಿತ್ರೀಕರಣಕ್ಕಾಗಿ ಸ್ಲೊವೇನಿಯಾಗೆ ತೆರಳಿದ್ದಾರೆ. ಇನ್ನೆರಡು ದಿನಗಳಲ್ಲಿ ಹಿಂದಿರುಗುವ ಅವರು ತಮ್ಮ ಚಿತ್ರದ ಮುಂದಿನ ಹಂತದ ಚಿತ್ರೀಕರಣಕ್ಕೆ ಅಣಿಯಾಗಲಿದ್ದಾರೆ.
ಎಂ ಎನ್ ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕ ನಟಿ. ಹರಿಪ್ರಿಯಾ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೆ ಮೊದಲ ಬಾರಿಗೆ ಈ ಎರಡೂ ನಟಿಯರು ಪುನೀತ್ ಎದುರು ನಟಿಸುತ್ತಿರುವುದು.
ಹಾಗೆಯೇ 'ಅಂಜನಿಪುತ್ರ'ದಲ್ಲಿ ನಟಿ ರಮ್ಯಕೃಷ್ಣ ಪುನೀತ್ ಅವರ ತಾಯಿಯ ಪಾತ್ರದಲ್ಲಿ ನಟಿಸಲಿದ್ದಾರೆ. ರವಿ ಬಸರೂರ್ ಸಂಗೀತ ನೀಡಿದ್ದು, ಸ್ವಾಮಿ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ.