ಬೆಂಗಳೂರು: ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ದಂಪತಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿ ಸತತ 8 ಬಾರಿ ವಿಚಾರಣೆಗೆ ಗೈರಾಗಿರುವುದಕ್ಕೆ ಕೌಟುಂಬಿಕ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
2015ರ ಸೆಪ್ಟೆಂಬರ್ ನಲ್ಲಿ ಸುದೀಪ್ ದಂಪತಿ ಸಮ್ಮತಿಯೊಂದಿಗೆ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ಸಲ್ಲಿಸಿದ ದಿನದಿಂದ ಇಲ್ಲಿಯವರೆಗೂ ಒಮ್ಮೆಯೂ ಸಹ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ನ್ಯಾಯಾಧೀಶರು ಆಗಸ್ಟ್ 24ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಸೂಚನೆ ನೀಡಿದೆ.
ಒಂದು ವೇಳೆ ದಂಪತಿ ರಾಜಿ ಸಂಧಾನ ಮಾಡಿಕೊಂಡಿದ್ದರೆ ಆ ಅಂಶವನ್ನಾದರೂ ನ್ಯಾಯಾಲಯಕ್ಕೆ ತಿಳಿಸಿ ಇಲ್ಲವಾದಲ್ಲಿ ಅರ್ಜಿಯಲ್ಲಿರುವ ಅಂಶಗಳನ್ನು ಪರಿಗಣಿಸಿ ಸೂಕ್ತ ಆದೇಶ ಹೊರಡಿಸುವುದಾಗಿ ನ್ಯಾಯಾಧೀಶರು ಎಚ್ಚರಿಕೆ ನೀಡಿದ್ದಾರೆ.
ದಿ ವಿಲನ್ ಚಿತ್ರದ ಚಿತ್ರೀಕರಣಕ್ಕಾಗಿ ಸುದೀಪ್ ಬ್ಯಾಂಕಾಕ್ ಗೆ ತೆರಳಿದ್ದು ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಸುದೀಪ್ ಪರ ವಕೀಲರು ತಿಳಿಸಿದ್ದರಿಂದ ನ್ಯಾಯಾಧೀಶರು ಆಗಸ್ಟ್ 24ಕ್ಕೆ ವಿಚಾರಣೆಯನ್ನು ಮುಂದೂಡಿದೆ.