ಬೆಂಗಳೂರು: ಇನ್ನೆರಡು ದಿನಗಳಲ್ಲಿ ನಿರ್ದೇಶಕ ಪ್ರೇಮ್ ತಮ್ಮ ಮುಂದಿನ ಚಿತ್ರ 'ದ ವಿಲನ್' ನ ಬ್ಯಾಂಗ್ಕಾಕ್ ಚಿತ್ರೀಕರಣವನ್ನು ಮುಗಿಸಲಿದ್ದಾರೆ. ಸಿನೆಮಾ ಮುಂದುವರೆಯುತ್ತಿರುವ ಬಗ್ಗೆ ಸುದೀಪ್ ಅವರ ಬೆಂಬಲದ ಮಾತುಗಳಿಂದ ನಿರ್ದೇಶಕ ಸಂತಸಗೊಂಡಿದ್ದಾರೆ ಕೂಡ. "ಈ ಬಾರಿ ಬ್ಯಾಂಗ್ಕಾಕ್ ಚಿತ್ರೀಕರಣದಲ್ಲಿ ಕೆಲಸ ಮಾಡಿದ ಅನುಭವ ಅದ್ಭುತವಾಗಿತ್ತು. ಸಿದ್ಧತೆಗಳು, ನಿರ್ಮಾಣ ಮೌಲ್ಯ, ತಂತ್ರಜ್ಞರ ತಂಡ.. ಎಲ್ಲವು ಅಚ್ಚುಕಟ್ಟಾಗಿದ್ದು ಅದ್ಭುತವಾಗಿದ್ದವು" ಎಂದು ಸುದೀಪ್ ಟ್ವೀಟ್ ಮಾಡಿದ್ದರು.
ಇದರ ಬಗ್ಗೆ ಹೆಮ್ಮೆಯಿಂದಿರುವ ನಿರ್ದೇಶಕ ಪ್ರೇಮ್ "ನಟ ಸಿನೆಮಾ ಚಿತ್ರೀಕರಣದ ಬಗ್ಗೆ ಸಂತಸದಿಂದಿರುವುದು ಖುಷಿ ತಂದಿದೆ" ಎಂದಿದ್ದಾರೆ.
ಈಮಧ್ಯೆ ನಾಯಕನಟಿ ಅಮಿ ಜ್ಯಾಕ್ಸನ್ ಜೊತೆಗಿನ ಅನುಭವಗಳನ್ನು ಹಚ್ಚಿಕೊಳ್ಳುವ ನಿರ್ದೇಶಕ "ಅವರ ಸಮಯ ಪರಿಪಾಲನೆ ನನಗೆ ಬಹಳ ಮೆಚ್ಚುಗೆಯಾಯಿತು. ಅವರ ಜೊತೆಗೆ ಒಂದು ವಾರದಿಂದ ಚಿತ್ರೀಕರಣ ನಡೆಸಿದ್ದೇನೆ ಮತ್ತು ಅವರು ಪ್ರತಿ ದೃಶ್ಯವನ್ನು ಅರ್ಥ ಮಾಡಿಕೊಂಡು ಸೆಟ್ ಗೆ ಬರುತ್ತಾರೆ, ಕ್ಯಾಮರಾ ಮುಂದೆ ನಿಲ್ಲುವುದಕ್ಕೂ ಮುಂಚಿತವಾಗಿ ಎಲ್ಲ ಸಣ್ಣ ಸಣ್ಣ ವಿವರಗಳನ್ನು ನನ್ನ ಜೊತೆಗೆ ಚರ್ಚಿಸುತ್ತಾರೆ" ಎನ್ನುತ್ತಾರೆ ಪ್ರೇಮ್.
ಅವರ ಸ್ಟಂಟ್ ಗಳಿಂದ ಅಚ್ಚರಿಗೊಂಡೆ ಎನ್ನುವ ಪ್ರೇಮ್ "ಕಾರ್ ಸ್ಟಂಟ್ ಒಂದನ್ನು ಶೂಟ್ ಮಾಡುತ್ತಿದ್ದೆವು. ಅದಕ್ಕಾಗಿ ಒಬ್ಬ ತಂತ್ರಜ್ಞರನ್ನು ಕರೆಸಿಕೊಂಡಿದ್ದೆವು. ಆದರೆ ಅಪಾಯವಿದ್ದರೂ ಆ ಸ್ಟಂಟ್ ಮಾಡುವುದಕ್ಕೆ ಅಮಿ ಅವರೇ ಮುಂದೆ ಬಂದರು. ಈ ಪ್ಯಾಷನ್ ಮತ್ತು ವೃತ್ತಿಧರ್ಮ ನಮ್ಮೆಲ್ಲರಿಗೂ ಅಚ್ಚರಿ ತಂದಿತು" ಎನ್ನುತ್ತಾರೆ.
ಈ ವಾರ ಬೆಂಗಳೂರಿಗೆ ಹಿಂದಿರುಗಲಿರುವ ಪ್ರೇಮ್, ಲೇಹ್ ಲಡಾಕ್ ಗೆ ನಂತರ ಚಿತ್ರೀಕರಣಕ್ಕಾಗಿ ತೆರಳಲಿದ್ದಾರೆ. ಅಲ್ಲಿ ನಟ ಶಿವರಾಜ್ ಕುಮಾರ್ ತಂಡವನ್ನು ಸೇರಲಿದ್ದಾರೆ.
ಸಿ ಆರ್ ಮನೋಹರ್ ನಿರ್ಮಿಸುತ್ತಿರುವ 'ದ ವಿಲನ್'ಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.