ನವದೆಹಲಿ: ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ದೇಶನದ 'ಪದ್ಮಾವತಿ' ಚಿತ್ರಕ್ಕೆ ಒಂದಲ್ಲ ಒಂದು ಅಡ್ಡಿಯುಂಟಾಗುತ್ತಲೇ ಇದೆ. ಈ ಹಿಂದೆ ಬನ್ಸಾಲಿ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಇದೀಗ ಕೆಲ ದುಷ್ಕರ್ಮಿಗಳು ಚಲನಚಿತ್ರದ ಸೆಟ್ ಗೆ ಬೆಂಕಿ ಹಚ್ಚಿದ್ದಾರೆ.
ಪದ್ಮಾವತಿ ಚಿತ್ರದ ಚಿತ್ರೀಕರಣ ಕೆಲ ದಿನಗಳಿಂದಲೂ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿರುವ ಪನ್ಹಾಲಾ ಫೋರ್ಟ್ ಬಳಿ ನಡೆಯುತ್ತಿತ್ತು. ಕಳೆದ ರಾತ್ರಿ 10.30ರ ಸುಮಾರಿಗೆ ಚಿತ್ರದ ಸೆಟ್ ಗೆ ಬೆಂಕಿ ಹಚ್ಚಲಾಗಿದೆ ಎಂದು ತಿಳಿದುಬಂದಿದೆ.
ಘಟನೆ ವೇಳೆ ಸ್ಥಳದಲ್ಲಿದ್ದ ಸಂಜಯ್ ಲೀಲಾ ಬನ್ಸಾಲಿ ಸೇರಿದಂತೆ ಚಿತ್ರದ ಇನ್ನಿತರ ತಂಡದವರು ಸುರಕ್ಷಿತರಾಗಿದ್ದಾರೆಂದು ಮೂಲಗಳು ತಿಳಿಸಿವೆ.
ಈ ಹಿಂದೆ ರಾಜಸ್ತಾನದಲ್ಲಿ ಪದ್ಮಾವತಿ ಸೆಟ್ ಮೇಲೆ ದಾಳಿ ನಡೆಸಲಾಗಿತ್ತು. ಸಂಜಯ್ ಲೀಲಾ ಬನ್ಸಾಲಿಯವರ ಮೇಲೆ ಹಲ್ಲೆ ನಡೆಸಿದ್ದ ಕೆಲವರು ಅವರ ಬಟ್ಟೆಯನ್ನು ಹರಿದುಹಾಕಿದ್ದರು.