ಮುಂಬೈ: ಕಾದಂಬರಿ ನಕಲು ಮಾಡಿದ್ದಾರೆ ಎಂದು ಆರೋಪಿಸಿ ಬೆಂಗಳೂರು ಮೂಲದ ಲೇಖಕಿ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ಬೋಗಸ್ ಎಂದು ಬರಹಗಾರ ಚೇತನ್ ಭಗತ್ ಹೇಳಿದ್ದಾರೆ.
ಬೆಂಗಳೂರು ನ್ಯಾಯಾಲಯದಲ್ಲಿ ಅನ್ವಿತಾ ಬಾಜಪೈ ಈ ಕಾನೂನು ಪ್ರಕರಣ ದಾಖಲಿಸಿದ್ದು, ಚೇತನ್ ಭಗತ್ ಅವರ 'ಒನ್ ಇಂಡಿಯನ್ ಗರ್ಲ್' ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಕೋರ್ಟ್ ಆದೇಶ ನೀಡಿತ್ತು.
"ಪಾತ್ರಗಳು, ಪ್ರದೇಶಗಳು ಮತ್ತು ಭಾವನಾತ್ಮಕ ಝರಿಯನ್ನು" ಭಗತ್ ತಮ್ಮ ಪುಸ್ತಕ 'ಲೈಫ್, ಆಡ್ಸ್ ಮತ್ತು ಎಂಡ್ಸ್' ನಿಂದ ಕದ್ದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಾಜಪೈ ದೂರಿದ್ದಾರೆ.
ಗುರುವಾರ ಇದರ ಬಗ್ಗೆ ನ್ಯಾಯಾಲಯ ವಿಚಾರಣೆ ಮಾಡಲಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಭಗತ್ "ಪ್ರಕಟಿಸಿದ ಪುಸ್ತಕದಿಂದ ನಕಲು ಮಾಡುವಷ್ಟು ದಡ್ಡ ಅಲ್ಲ ನಾನು. ಇದು ನಿಜವಾಗಿಯೂ ಬೋಗಸ್ ಪ್ರಕರಣ... ಸುಳ್ಳು ಆರೋಪ. ಕೋರ್ಟ್ ಬೇಸಿಗೆ ರಜೆಗೆ ಮುಚ್ಚುವುದಕ್ಕೂ ಮುಂಚಿತವಾಗಿ ಅವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದುದರಿಂದ ಇದು ಸಮಯ ಹಿಡಿಯುತ್ತಿದೆ ಆದರೆ ಸತ್ಯ ಹೊರಹೊಮ್ಮಲಿದೆ" ಎಂದಿದ್ದಾರೆ.
ಫೆಬ್ರವರಿ ೨೨ ರಂದು ಭಗತ್ ಅವರಿಗೆ ಕಾನೂನು ನೋಟಿಸ್ ಕಳುಹಿಸಿದ್ದ ಬಾಜಪೈ "ಕೂಡಲೇ 'ಒನ್ ಇಂಡಿಯನ್ ಗರ್ಲ್' ಪುಸ್ತಕವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಮತ್ತು ೫ ಲಕ್ಷ ರೂ ಪರಿಹಾರ ನೀಡಬೇಕು" ಎಂದು ಆಗ್ರಹಿಸಿದ್ದರು.
ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಚೇತನ್ "ನಾನು ಅವರ ಪುಸ್ತಕವನ್ನೇ ಓದಿಲ್ಲ. ನನ್ನ ಕಥೆ ಮೂಲ ಸೃಷ್ಠಿ. ಸದ್ಯಕ್ಕೆ ನಾನು 'ಹಾಫ್ ಗರ್ಲ್ ಫ್ರೆಂಡ್' ಸಿನೆಮಾ ಬಿಡುಗಡೆಯ ತರಾತುರಿಯಲ್ಲಿದ್ದೇನೆ. ನನ್ನ ಕಾನೂನು ತಂಡ ಇದನ್ನು ನೋಡಿಕೊಳ್ಳಲಿದೆ ಮತ್ತು ನನಗೆ ಜಯ ಸಿಗಲಿದೆ" ಎಂದು ಕೂಡ ಅವರು ಹೇಳಿದ್ದಾರೆ.