ಬೆಂಗಳೂರು: ನೂತನ ನಟ ಆಕಾಶ್ ನಾಗಪಾಲ್ ಪಾದಾರ್ಪಣೆ ಮಾಡಬೇಕಿದ್ದ ಸಿನೆಮಾದ ಸ್ಕ್ರಿಪ್ಟ್, ತಾರಾಗಣ ಮತ್ತು ತಂತ್ರಜ್ಞರ ತಂಡವನ್ನು ನಿರ್ದೇಶಕ ಯೋಗರಾಜ್ ಭಟ್ ಬಹುತೇಕ ಅಂತಿಮಗೊಳಿಸಿದ್ದರು. ಆದರೆ ಈಗ ಸ್ಕ್ರಿಪ್ಟ್ ಅನ್ನು ಬದಲಾಯಿಸಿ ಯುವ ನಟನಿಗೆ ಮತ್ತೆ ಒಂದು ಸಾಲಿನ ಕಥೆ ಹೇಳಲಿದ್ದಾರಂತೆ ಭಟ್.
ಹಿಂದಿನ ಯೋಜನೆಯಂತೆ ಕಳೆದ ವರ್ಷವೇ ಯೋಗರಾಜ್ ಈ ಸಿನೆಮಾವನ್ನು ಪ್ರಾರಂಭಿಸಬೇಕಿತ್ತು. ಇದಕ್ಕಾಗಿ ಪ್ರಜ್ಞಾ, ನಿಖಿತಾ ನಾರಾಯಣ್ ಮತ್ತು ವೈಶಾಲಿ ದೀಪಾಲಿ, ಮೂವರು ನಾಯಕ ನಟಿಯರನ್ನು ಆಯ್ಕೆ ಮಾಡಿದ್ದರು ಕೂಡ. ವಿ ಹರಿಕೃಷ್ಣ ಸಂಗೀತ ನೀಡಲಿದ್ದು, ಸುಜ್ಞಾನ್ ಛಾಯಾಗ್ರಹಣ ಮಾಡಲಿದ್ದಾರೆ ಎಂದು ಘೋಷಿಸಲಾಗಿತ್ತು. 'ನನ್ನ ಹೆಸರೇ ಅನುರಾಗಿ' ಎಂದು ಶೀರ್ಷಿಕೆಯನ್ನು ಕೂಡ ಅಂತಿಮಗೊಳಿಸಲಾಗಿತ್ತಿ.
ಹಲವು ಕಾರಣಗಳಿಗೆ ಈ ಸಿನೆಮಾ ವಿಳಂಬವಾಗಿ, ಭಟ್ಟರು ಗಣೇಶ್ ಜೊತೆಗೆ 'ಮುಗುಳುನಗೆ' ಪ್ರಾರಂಭಿಸಿದ್ದರು. ಈಗ ಅದು ಡಬ್ಬಿಂಗ್ ಹಂತದಲ್ಲಿದೆ.
ಈಗ ಸ್ಕ್ರಿಪ್ಟ್ ಬದಲಾಯಿಸಲು ನಿರ್ದೇಶಕ ಮುಂದಾಗಿದ್ದು, ಹಿಂದಿನ ನಾಯಕನಟಿಯರು ಮತ್ತು ತಂತ್ರಜ್ಞರು ಸಿನೆಮಾದ ಭಾಗವಾಗಿ ಉಳಿದುಕೊಳ್ಳಲಿದ್ದಾರೆಯೇ? ಕಾದು ನೋಡಬೇಕು. 'ಮುಗುಳು ನಗೆ' ಸಿನೆಮಾದ ಬಿಡುಗಡೆಯ ನಂತರ ಈ ಸಿನೆಮಾದ ಚಿತ್ರೀಕರಣ ಜುಲೈ ಅಥವಾ ಆಗಸ್ಟ್ ನಲ್ಲಿ ಪ್ರಾರಂಭವಾಗಲಿದೆ.
ಈ ಸಿನೆಮಾವನ್ನು ಆಕಾಶ್ ಅವರ ತಂದೆ ಸುರೇಶ ನಾಗಪಾಲ್ ನಿರ್ಮಿಸುತ್ತಿದ್ದಾರೆ. ಅಮೆರಿಕಾದಲ್ಲಿ ನಟನೆಯ ತರಬೇತಿ ಪಡೆದಿರುವ ಆಕಾಶ್ ಚೊಚ್ಚಲ ಬಾರಿಗೆ ನಟಿಸಲು ಸಿದ್ಧರಾಗಿದ್ದಾರೆ.