ಬೆಂಗಳೂರು: 'ಗಾಳಿಪಟ', 'ಮನಸಾರೆ', 'ಪಂಚರಂಗಿ' ಇಂತಹ ಹಿಟ್ ಸಿನೆಮಾಗಳನ್ನು ನೀಡಿದ ಯೋಗರಾಜ್ ಭಟ್ ಮತ್ತು ದಿಗಂತ್ ಜೋಡಿ, ಪಂಚರಂಗಿ ದ್ವಿತೀಯ ಭಾಗಕ್ಕೆ ಮತ್ತೆ ಸಜ್ಜಾಗಲಿದೆ ಎಂಬ ಸುದ್ದಿ ಈಗ ಚಾಲ್ತಿಯಲ್ಲಿದೆ.
ಯೋಗರಾಜ್ ಅವರ ನೆಚ್ಚಿನ ನಟ ದಿಗಂತ್ ಸದ್ಯಕ್ಕೆ 'ಗಾಳಿಪಟ-೨' ಸೆಟ್ ಗೆ ಸೇರಲಿದ್ದಾರೆ. ಈ ಸಿನೆಮಾದಲ್ಲಿ ಅವರು ಗಣೇಶ್ ಅವರೊಂದಿಗೆ ಅಭಿನಯಿಸುತ್ತಿದ್ದಾರೆ. ಈಗ ಪಂಚರಂಗಿ-೨' ವದಂತಿಗಳು ಕೂಡ ದಟ್ಟವಾಗಿದ್ದು, ದಿಗಂತ್, ಭರತ್ ಕುಮಾರ್ ಪಾತ್ರವನ್ನು ಮತ್ತೆ ಪೋಷಿಸಲಿದ್ದಾರೆ ಎಂಬ ಊಹಾಪೋಹಗಳು ಎದ್ದಿವೆ.
"ಪಂಚರಂಗಿ ಮೊದಲ ಭಾಗ ಕೌಟುಂಬಿಕ ಮನರಂಜನಾ ಚಿತ್ರವಾಗಿ ಎಲ್ಲರ ಮನಗೆದ್ದಿತ್ತು. ಮತ್ತು ಈಗ ಅದರ ಎರಡನೇ ಭಾಗಕ್ಕೆ ಚರ್ಚೆಗಳು ಜರುಗುತ್ತಿವೆ" ಎಂದು ತಿಳಿಸುವ ಮೂಲಗಳು "ಈಗಲೇ ವಿವರಗಳನ್ನು ತಿಳಿಸುವುದಕ್ಕೆ ಸಾಧ್ಯವಿಲ್ಲ, ಆದರೆ ನಿರ್ದೇಶಕ-ನಟ ಜೋಡಿ ಮತ್ತೆ ಆ ಮಾಂತ್ರಿಕತೆಯನ್ನು ಮರುಕಳಿಸಲಿದೆ ಎಂದು ನಂಬಿದ್ದೇವೆ" ಎನ್ನುತ್ತವೆ.
ಈಮಧ್ಯೆ ದಿಗಂತ್ ಅವರ 'ಉತ್ಸವ್' ಸಿನೆಮಾ ಪ್ರಾರಂಭವಾಗುವ ಯಾವುದೇ ಸೂಚನೆಗಳು ಕಾಣುತ್ತಿಲ್ಲ. ಆಸ್ಟ್ರೇಲಿಯಾ ಪ್ರವಾಸದಿಂದ ಹಿಂದಿರುಗಿರುವ ಯೋಗರಾಜ್ ಭಟ್ ಶೀಘ್ರದಲ್ಲೇ ನಟ ಆಕಾಶ್ ನಾಗಪಾಲ್ ಅವರಿಗಾಗಿ ಸಿನೆಮಾವೊಂದನ್ನು ನಿರ್ದೇಶಿಸಲಿದ್ದಾರೆ.