ಸಿನಿಮಾ ಸುದ್ದಿ

ಕನ್ನಡ ರಾಜ್ಯೋತ್ಸವದಂದು ರಾಮಾ ರಾಮಾ ರೇ ಚಿತ್ರದ ಪುಸ್ತಕ ಬಿಡುಗಡೆ!

Srinivas Rao BV
ಬೆಂಗಳೂರು: ತಮ್ಮ ಮೊದಲ ನಿರ್ದೇಶನದ ಚಿತ್ರ ರಾಮಾ ರಾಮಾ ರೇ.. ಚಿತ್ರದಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದ್ದ ನಿರ್ದೇಶಕ ಸತ್ಯಪ್ರಕಾಶ್ ಈಗ ಮತ್ತೊಂದು ವಿನೂತನ ಪ್ರಯೋಗ ಮಾಡಿದ್ದಾರೆ. 
ಚಿತ್ರದ ಮೇಕಿಂಗ್ ಬಗ್ಗೆ ವಿಡಿಯೋ ತುಣುಕುಗಳನ್ನು ಹಂಚಿಕೆ ಮಾಡುವುದು ಸಾಮಾನ್ಯ, ಆದರೆ ಸತ್ಯಪ್ರಕಾಶ್ ಒಂದು ವರ್ಷದ ಹಿಂದೆ ಬಿಡುಗಡೆಯಾದ ತಮ್ಮ ಚಿತ್ರ ರಾಮಾ ರಾಮಾ ರೇ ಚಿತ್ರದ ಬಗ್ಗೆ ಪುಸ್ತಕವನ್ನು ಹೊರತಂದಿದ್ದು, ಇದಕ್ಕಾಗಿ ಟ್ರೇಲರ್ ನ್ನೂ ಬಿಡುಗಡೆ ಮಾಡಿದ್ದಾರೆ. ಕನ್ನಡ ರಾಜ್ಯೋತ್ಸವ ನ.1 ರಂದು ಪುಸ್ತಕ ಬಿಡುಗಡೆಯಾಗುತ್ತಿದೆ. 
"ನಮ್ಮ ಚಿತ್ರದ ಬಗ್ಗೆ ಮೆಚ್ಚುಗೆ ಹಾಗೂ ನಿರಾಕರಣೆಗಳನ್ನು ಮೀರಿದ ಭಾವವೊಂದು ನೋಡುಗರಲ್ಲಿ ಉಂಟಾಗಿರುವುದನ್ನು ನಾವು ಗಮನಿಸಿದ್ದೇವೆ. ಅದರ ಜೊತೆಗೆ ಚಿತ್ರದ ಹಲವಾರು ಸಂಗತಿಗಳ ಬಗ್ಗೆ ಕುತೂಹಲಭರಿತ ಪ್ರಶ್ನೆಗಳೂ ಸಹ ನಮಗೆ ಎದುರಾಗಿವೆ". ಹಾಗಾಗಿ ನಾವು ಯಾಕೆ ಈ ಸಿನಿಮಾದ ಬಗ್ಗೆ ಪುಸ್ತಕವೊಂದನ್ನು ಮಾಡಬಾರದೆಂಬ ಆಲೋಚನೆ ಬಂದಿತ್ತು.  ಚಿತ್ರಕ್ಕೆ ಸಂಬಂಧಪಟ್ಟ ಪ್ರತಿಯೊಂದು ಅಂಶಗಳನ್ನು ಪ್ರಸ್ತುತಪಡಿಸಿ, ನೋಡುಗರು ಕೇಳಿದ ಒಂದೊಂದು ಪ್ರಶ್ನೆಗಳಿಗೂ, ಜಿಜ್ಞಾಸೆಗಳಿಗೂ ಕ್ರಮೇಣ ಉತ್ತರಿಸುತ್ತಾ ಈ ಪುಸ್ತಕವನ್ನು ಸಿದ್ಧಪಡಿಸಿದ್ದೇವೆ. ಇದರ ಇನ್ನೊಂದು ಆಯಾಮವೆಂದರೆ, ಓದುಗರಿಗೂ ಕೂಡ ಚಲನಚಿತ್ರ ತಯಾರಿಕೆಯ ಎಲ್ಲ ಸಂಗತಿಗಳ ಬಗ್ಗೆ ಸೂಕ್ಷ್ಮ ಅರಿವನ್ನು ಈ ಪುಸ್ತಕವು ಕೊಡಮಾಡುತ್ತದೆ, ಹಾಗೂ ಚಿತ್ರದ ಸಂಪೂರ್ಣ ಚಿತ್ರಕಥೆಯನ್ನು ಸಹ ಈ ಪುಸ್ತಕವು ಒಳಗೊಂಡಿದ್ದು, ಸಿನಿಮಾಸಕ್ತರಿಗೆ ಖಂಡಿತಾ ಉಪಯೋಗವಾಗಲಿದೆ".  ಎಂದು ಚಿತ್ರ ತಂಡ ಹೇಳಿದೆ. 
ರಾಮಾ ರಾಮಾ ರೇ ಪುಸ್ತಕ ನ.1 ರಿಂದ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳಲ್ಲಿಯೂ ಲಭ್ಯವಿರಲಿದೆ. 
SCROLL FOR NEXT