ಶಿಲ್ಪ ಶೆಟ್ಟಿ ಮತ್ತು ರಾಜ್ ಕುಂದ್ರಾ
ಮುಂಬಯಿ: ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಅವರ ಫೋಟೋವನ್ನು ಕ್ಲಿಕ್ಕಿಸಿದ್ದಕ್ಕೆ ಮಾಧ್ಯಮಗಳ ಫೋಟೋಗ್ರಾಫರ್ ಗಳ ಮೇಲೆ ರೆಸ್ಟೋರೆಂಟ್ ಬೌನ್ಸರ್ ಗಳು ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಮುಂಬಯಿನ ಬಸ್ಟಿನ್ ರೆಸ್ಟೋರೆಂಟ್ ನಲ್ಲಿ ಡಿನ್ನರ್ ಮುಗಿಸಿ ಶಿಲ್ಪಾ ಶೆಟ್ಟಿ ದಂಪತಿ ತೆರಳುತ್ತಿದ್ದರು. ಈ ವೇಳೆ ಅಲ್ಲಿದ್ದ ಛಾಯಾಗ್ರಾಹಕರು ಫೋಟೋ ಕ್ಲಿಕ್ಕಿಸಿದರು.
ಫೋಟೋಗ್ರಾಫರ್ ಗಳನ್ನು ನೋಡಿ ಶಿಲ್ಪಾ ಶೆಟ್ಟಿ ಮತ್ತ ರಾಜ್ ಕುಂದ್ರಾ ನಗುತ್ತಲೇ ಪೋಸ್ ಕೊಟ್ಟು ತೆರಳಿದ್ದಾರೆ.
ಈ ವೇಳೆ ರೆಸ್ಟೋರೆಂಟ್ ನಲ್ಲಿದ್ದ ಬೌನ್ಸರ್ ಗಳು ಏಕಾಏಕಿ ಫೋಟೋಗ್ರಾಫರ್ ಗಳ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ರೆಸ್ಟೊರೆಂಟ್ ಬೌನ್ಸರ್‍ಗಳಿಂದ ಹಲ್ಲೆಗೊಳಗಾಗಿರುವ ಛಾಯಾಗ್ರಾಹಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರು ಬೌನ್ಸರ್ ಗಳನ್ನು ಬಂಧಿಸಿದ್ದಾರೆ.
ಇನ್ನೂ ಈ ಸಂಬಂಧ ಕ್ಷಮೆ ಕೇಳಿರುವ ರೆಸ್ಟೊರೆಂಟ್ ಸೆಕ್ಯೂರಿಟಿ ಎಜೆಂಟ್ ಬದಲಾಯಿಸುವುದಾಗಿ ಹೇಳಿಕೆ ನೀಡಿದೆ.