1980ರ ಡಾ.ರಾಜ್ ಕುಮಾರ್ ಅಭಿನಯದ ಚಲಿಸುವ ಮೋಡಗಳು ಚಿತ್ರದ ಮೈ ಲಾರ್ಡ್ ನನ್ನ ವಾದ ಕೇಳಿ ಕೇಳಿ ಹಾಡಿನ ಸಾಲುಗಳನ್ನು ಮರು ಸೃಷ್ಟಿಸಿ ಅವರ ಮೊಮ್ಮಗ ವಿನಯ್ ರಾಜ್ ಕುಮಾರ್ ಅಭಿನಯದ ಅನಂತು /ನುಸ್ರತ್ ಚಿತ್ರಕ್ಕೆ ಅಳವಡಿಸಲಾಗಿದೆ.
1980ರಲ್ಲಿ ನ್ಯಾಯಾಲಯದ ಕೊಠಡಿಯಲ್ಲಿ ಈ ಹಾಡನ್ನು ರಾಜ್ ಕುಮಾರ್ ಮತ್ತು ಅಂಬಿಕಾರ ನಡುವೆ ಚಿತ್ರೀಕರಿಸಲಾಗಿತ್ತು. ಅನಂತು /ನುಸ್ರತ್ ನಲ್ಲಿ ವಿನಯ್ ರಾಜ್ ಕುಮಾರ್ ವಕೀಲರ ಪಾತ್ರ ಮಾಡುತ್ತಿರುವುದರಿಂದ ಈ ಹಾಡು ಚಿತ್ರಕ್ಕೆ ಹೊಂದಿಕೆಯಾಗಬಹುದು ಎಂಬುದು ಚಿತ್ರತಂಡದ ಲೆಕ್ಕಾಚಾರವಾಗಿದೆ.
45 ಸೆಕೆಂಡ್ ಗಳ ರೂಪಾಂತರದಲ್ಲಿ ವಿನಯ್ ಮತ್ತು ಲತಾ ಹೆಗ್ಡೆ ಅಭಿನಯಿಸಲಿದ್ದಾರೆ. ಈ ತಿಂಗಳಾಂತ್ಯದಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದ್ದು ಕಂಠೀರವ ಸ್ಟುಡಿಯೊ ಅಥವಾ ಮೋಹನ್ ಬಿ ಕೆರೆ ಸ್ಟುಡಿಯೊದಲ್ಲಿ ನಡೆಯಲಿದೆ.
ರಾಜ್ ಕುಮಾರ್ ನಟಿಸಿರುವ ಹಾಡಿನ ಇಡೀ ದೃಶ್ಯವನ್ನು ಮರುಸೃಷ್ಟಿಸಲಾಗುತ್ತಿದೆ. ಇಲ್ಲಿ ನಾಯಕ-ನಾಯಕಿಯ ವಸ್ತ್ರಾಭರಣ ಕೂಡ ರಾಜ್ ಕುಮಾರ್ ಮತ್ತು ಅಂಬಿಕಾ ಮೂಲ ಹಾಡಿನಲ್ಲಿ ಧರಿಸಿರುವ ಬಟ್ಟೆಯಂತೆಯೇ ಇದೆ. ಈ ಹಾಡಿಗೆ ಮಂಜು ಕೊರಿಯಾಗ್ರಫಿ ಮಾಡಲಿದ್ದಾರೆ.
ಈ ಹಾಡು ವಿನಯ್ ರಾಜ್ ಕುಮಾರ್ ಹುಟ್ಟುಹಬ್ಬದ ದಿನವಾದ ಮೇ 7ರಂದು ಬಿಡುಗಡೆಯಾಗಲಿದೆ.