ಸಿನಿಮಾ ಸುದ್ದಿ

ನಟಿ ಮೇಲೆ ನಡೆದ ದಾಳಿಯ ವಿಡಿಯೊಗಳನ್ನು ನೀಡಲು ಸಾಧ್ಯವಿಲ್ಲ; ನಟ ದಿಲೀಪ್ ಅರ್ಜಿ ತಿರಸ್ಕರಿಸಿದ ಹೈಕೋರ್ಟ್

Sumana Upadhyaya
ತಿರುವನಂತಪುರಂ: ಮಲಯಾಳಂ ನಟಿ ಮೇಲೆ ನಡೆದ ಹಲ್ಲೆಗೆ ಸಂಬಂಧಪಟ್ಟ ದೃಶ್ಯಗಳನ್ನು ಹೊಂದಿರುವ ಮೊಬೈಲ್ ನಲ್ಲಿರುವ ಮೆಮೊರಿ ಕಾರ್ಡನ್ನು ನೀಡುವಂತೆ ಮಲಯಾಳಂ ನಟ ದಿಲೀಪ್ ಮಾಡಿರುವ ಮನವಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿದೆ.
ಕೆಳ ಹಂತದ ನ್ಯಾಯಾಲಯ ಕಳೆದ ಫೆಬ್ರವರಿಯಲ್ಲಿ ಕೂಡ ನಟನ ಮನವಿಯನ್ನು ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ದಿಲೀಪ್ ಹೈಕೋರ್ಟ್ ಮೊರೆ ಹೋಗಿದ್ದರು.
ಫೋನ್ ನಲ್ಲಿರುವ ಮೆಮೊರಿ ಕಾರ್ಡುಗಳನ್ನು ನೀಡಿದರೆ ನಟಿಯ ಖಾಸಗಿತನವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಅಂಗಮಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ದಿಲೀಪ್ ಮನವಿಯನ್ನು ತಿರಸ್ಕರಿಸಿತ್ತು. ಪ್ರಕರಣದ ವಿಚಾರಣೆ ಸದ್ಯದಲ್ಲಿಯೇ ಆರಂಭವಾಗಲಿರುವುದರಿಂದ ವಿಚಾರಣೆಯನ್ನು ವಿಳಂಬ ಮಾಡುವ ತಂತ್ರವಿದು ಎಂದು ಹೈಕೋರ್ಟ್ ಹೇಳಿದೆ.
ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ವಿವಾದದಲ್ಲಿ ನಟ ದಿಲೀಪ್ ಮುಖ್ಯ ಆರೋಪಿಯಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ದಿಲೀಪ್ ವಿವಿಧ ನ್ಯಾಯಾಲಯಗಳಲ್ಲಿ 11 ಮನವಿಗಳನ್ನು ಸಲ್ಲಿಸಿದ್ದರು. ತನಿಖೆಯನ್ನು ವಿಳಂಬ ಮಾಡಲು ದಿಲೀಪ್ ಅವರು ಮನವಿ ಸಲ್ಲಿಸುತ್ತಿದ್ದು ತನಿಖೆಯನ್ನು ಸಿಬಿಐಗೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ಕೇರಳ ಸರ್ಕಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ವಿಶೇಷ ತನಿಖಾ ದಳವೇ ವಿಚಾರಣೆ ಮುಂದುವರಿಸಲಿ ಎಂದು ಮನವಿ ಮಾಡಿಕೊಂಡಿತ್ತು.
ನಟಿಯ ಅಪಹರಣ ಮತ್ತು ಅತ್ಯಾಚಾರಕ್ಕೆ ಸಂಬಂಧಪಟ್ಟಂತೆ ಕಳೆದ ವರ್ಷ ಜುಲೈ 10ರಂದು ಬಂಧಿತರಾಗಿದ್ದ ದಿಲೀಪ್ 85 ದಿನಗಳ ಕಾಲ ಕಸ್ಟಡಿಯಲ್ಲಿದ್ದು ಅಕ್ಟೋಬರ್ 3ರಂದು ಬಿಡುಗಡೆಗೊಂಡಿದ್ದರು.
SCROLL FOR NEXT