ಸಿನಿಮಾ ಸುದ್ದಿ

ತಾಂತ್ರಿಕ ದೋಷದಿಂದ 'ಒಂದಲ್ಲಾ ಎರಡಲ್ಲಾ' ಚಿತ್ರಕ್ಕೆ ಭಾರೀ ನಷ್ಟ!

Sumana Upadhyaya

ಚಿತ್ರಕಥೆಯಿಂದ ಒಂದಲ್ಲಾ ಎರಡಲ್ಲಾ ಸಿನಿಮಾ ಪ್ರೇಕ್ಷಕರ ಬಾಯಲ್ಲಿ ಹರಿದಾಡುತ್ತಿದ್ದರೂ ಕೂಡ ನಿರ್ದೇಶಕ ಸತ್ಯಪ್ರಕಾಶ್ ತೃಪ್ತರಾಗಿಲ್ಲ. ಕಾರಣ, ಚಿತ್ರ ನಿರ್ಮಾಪಕರಿಗೆ ಮೊದಲ ದಿನ ಮೊದಲ ಶೋ ಬಿಡುಗಡೆಯಲ್ಲಿ ಡಿಜಿಟಲ್ ಸೇವಾ ಪೂರೈಕೆದಾರರಿಂದ ಎದುರಾದ ತಾಂತ್ರಿಕ ದೋಷ.

ಇದರಿಂದ ಅನೇಕ ಪ್ರೇಕ್ಷಕರು ಸಿನಿಮಾ ನೋಡಲು ಸಾಧ್ಯವಾಗಲಿಲ್ಲ. ಆಗಸ್ಟ್ 24ರಂದು ಕರ್ನಾಟಕಾದ್ಯಂತ ಸುಮಾರು 20 ಕೇಂದ್ರಗಳಲ್ಲಿ ಒಂದಲ್ಲಾ ಎರಡಲ್ಲಾ ಸಿನಿಮಾ ಪ್ರದರ್ಶನ ಕಾಣಲಿಲ್ಲ.

ಚಿತ್ರವನ್ನು ಪ್ರಚಾರ ಮಾಡಲು ಮೊದಲ ದಿನ ಎಲ್ಲಾ ಥಿಯೇಟರ್ ಗಳಿಗೆ ಭೇಟಿ ನೀಡುವ ಯೋಜನೆಯಲ್ಲಿ ಚಿತ್ರತಂಡವಿತ್ತು. ಆದರೆ ತಾಂತ್ರಿಕ ದೋಷ ಕಂಡುಬಂದ ಹಿನ್ನಲೆಯಲ್ಲಿ ಕೊನೆ ಕ್ಷಣದಲ್ಲಿ ರದ್ದುಪಡಿಸಲಾಯಿತು. ಮರುದಿನವಾದರೂ ಎಲ್ಲಾ ಕಡೆ ಚಿತ್ರ ಬಿಡುಗಡೆಯಾಗಲಿ ಎಂಬ ನಿಟ್ಟಿನಲ್ಲಿ ಕೆಲಸ ಮಾಡುವಲ್ಲಿ ಚಿತ್ರತಂಡ ಗಮನ ಹರಿಸಿತು.

ತಾಂತ್ರಿಕ ದೋಷದಿಂದ ಗಳಿಕೆ ಮೇಲೆ ತೀವ್ರ ಪೆಟ್ಟು ಬಿತ್ತು. ಅನೇಕ ಪ್ರೇಕ್ಷಕರನ್ನು ಕಳೆದುಕೊಂಡೆವು. ನನ್ನ ರಾಮ ರಾಮ ರೇ ಚಿತ್ರ ನೋಡಿದವರು ಈ ಚಿತ್ರದ ಮೊದಲ ಶೋ ನೋಡಲು ಬಂದಿದ್ದರು. ಆದರೆ ಅವರೆಲ್ಲರೂ ನಿರಾಶೆಯಿಂದ ಮರಳಬೇಕಾಯಿತು ಎನ್ನುತ್ತಾರೆ ನಿರ್ದೇಶಕ ಸತ್ಯಪ್ರಕಾಶ್.

ಇದೀಗ ರಾಜ್ಯಾದ್ಯಂತ 70 ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಂಡಿದೆ. ಚಿತ್ರ ನಿರ್ಮಾಪಕರು ನಿರಾಳರಾಗಿದ್ದಾರೆ. ನಮಗೆ ಉತ್ತಮ ಅಭಿಪ್ರಾಯಗಳು ಕೇಳಿಬರುತ್ತಿವೆ. ಆದರೂ ಆದ ನಷ್ಟವನ್ನು ತುಂಬುವುದು ಹೇಗೆ ಎಂದು ನೋಡುತ್ತಿದ್ದೇವೆ. ಬಾಯಿಮಾತಿನಿಂದ ಪ್ರಚಾರದಿಂದಲೇ ಪ್ರೇಕ್ಷಕರು ಬಂದು ಚಿತ್ರ ವೀಕ್ಷಿಸಬೇಕಾಗಿದೆ ಎಂದರು ಸತ್ಯ ಪ್ರಕಾಶ್.

SCROLL FOR NEXT