ಬೆಳ್ಳಂದೂರು ಕೆರೆ ಬಳಿ ರಶ್ಮಿಕಾ ಮಂದಣ್ಣ
ಬೆಂಗಳೂರು: ಕೆರೆ ಉಳಿಸಿ ಜಾಗೃತಿ ಅಭಿಯಾನ ಸಂಬಂಧ ಖ್ಯಾತ ನಟಿ ರಶ್ಮಿಕಾ ಮಂದಣ್ಣ ನಗರದ ಕುಖ್ಯಾತ ಬೆಳ್ಳಂದೂರು ಕೆರೆಯಲ್ಲಿ ಮಾಡಿಸಿದ್ದ ಫೋಟೋ ಶೂಟ್ ಇದೀಗ ವೈರಲ್ ಆಗುತ್ತಿದೆಯಾದರೂ, ಸತ್ಯ ತಿಳಿಯದೇ ಈ ಕುರಿತ ಮಾಧ್ಯಮಗಳು ಮಾಡಿದ್ದ ವರದಿ ಕೂಡ ವೈರಲ್ ಆಗುತ್ತಿದೆ.
ಜಲ ಮಾಲಿನ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಟಿ ರಶ್ಮಿಕಾ ಮಂದಣ್ಣ ಬೆಳ್ಳಂದೂರು ಕೆರೆ ಬಳಿ ಫೋಟೋ ಮಾಡಿಸಿದ್ದರು. ಸನ್ಮತಿ ಡಿ. ಪ್ರಸಾದ್ ಅವರ ನಿರ್ದೇಶನದಲ್ಲಿ ರಶ್ಮಿಕಾ ಅವರ ಫೋಟೋ ಶೂಟ್ ನಡೆದಿತ್ತು. ಈ ಕುರಿತ ಫೋಟೋಗಳನ್ನು ರಶ್ಮಿಕಾ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು. ಆದರೆ ಮಾಧ್ಯಮಗಳಲ್ಲಿ ರಶ್ಮಿಕಾ ಬೆಳ್ಳಂದೂರು ಕೆರೆಯೊಳಗೇ ಇಳಿದು ಈಜಾಡಿ ಫೋಟೋ ಶೂಟ್ ಮಾಡಿಸಿದ್ದಾರೆ ಎಂದು ವರದಿಯಾಗಿತ್ತು. ಈ ಸುದ್ದಿಗಳು ರಾಜ್ಯದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ವೈರಲ್ ಆಗ ತೊಡಗಿದ್ದು, ರಶ್ಮಿಕಾ ಅವರ ಕೆರೆ ಉಳಿಸಿ ಜಾಗೃತಿ ಅಭಿಯಾನಕ್ಕೆ ವ್ಯಾಪಕ ಬೆಂಬಲ ಕೂಡ ವ್ಯಕ್ತವಾಗಿತ್ತು.
ಆದರೆ ಇದೀಗ ಫೋಟೋ ಶೂಟ್ ನ ಅಸಲೀಯತ್ತು ಬಯಲಾಗಿದ್ದು, ನಟಿ ರಶ್ಮಿಕಾ ಮಂದಣ್ಣ ಬೆಳ್ಳಂದೂರು ಕೆರೆಯ ಬಳಿ ಹೋಗಿದ್ದರೇ ಹೊರತು ಕೆರೆಯಲ್ಲಿ ಇಳಿದು ಈಜಾಡಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ನತಃ ರಶ್ನಿಕಾ ಮಂದಣ್ಣ ಅವರೇ ಆಂಗ್ಲ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದು, ತಾವು ಬೆಳ್ಳಂದರೂ ಕೆರೆಯೊಳಗೆ ಕಾಲೇ ಇಟ್ಟಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
'ಸನ್ಮತಿ ಕೆರೆ ಜಾಗೃತಿ ಅಭಿಯಾನದ ಕುರಿತು ಫೋಟೋ ಶೂಟ್ ಮಾಡುವ ಸಂಬಂಧ ಕೇಳಿದಾಗ ನಾನು ಒಪ್ಪಿಕೊಂಡಿದ್ದೆ. ಅದರಂತೆ ನಾನು ಬೆಳ್ಳಂದೂರು ಕೆರೆ ಬಳಿ ಹೋಗಿದ್ದು ನಿಜ. ಅಲ್ಲಿ ಕೆಲ ಫೋಟೋಗಳನ್ನೂ ತೆಗೆದುಕೊಂಡೆವು. ಕೆರೆಯ ಆವರಣದ ಸ್ಥಿತಿ ನೋಡಿ ನಿಜಕ್ಕೂ ಬೇಸರವಾಯಿತು. ಇಲ್ಲಿನ ಜನ ಹೇಗೆ ವಾಸಿಸುತ್ತಿದ್ದಾರೆ ಎಂದು ನನಗೆ ತಿಳಿಯುತ್ತಿಲ್ಲ. ಕೆರೆ ಮೇಲೆ ಸಾಕಷ್ಟು ನೊರೆ ತುಂಬಿದ್ದು, ಕೆರೆ ಈ ಮಟ್ಟಿಗೆ ಕಲುಷಿತಗೊಂಡಿರುವುದನ್ನು ನೋಡಿ ಬೇಸರವಾಯಿತು ಎಂದು ಹೇಳಿದ್ದಾರೆ.
ಅಂತೆಯೇ ಕೆರೆಯೊಳಗಿನ ಫೋಟೋ ಶೂಟ್ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನನ್ನ ಪೋಸ್ಟ್ ಗಳಲ್ಲಿಯೇ ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಬೆಳ್ಳಂದರೂ ಕೆರೆಯ ಬಳಿ ಫೋಟೋ ಶೂಟ್ ಮಾಡಿಸಿದ್ದು, ಕೆರೆಯೊಳಗೆ ಅಲ್ಲ ಎಂದು. ಇಷ್ಟಕ್ಕೂ ಕೆರೆ ಸಂಪೂರ್ಣ ಕಲುಷಿತಗೊಂಡಿದ್ದು, ನೀರೊಳಗೆ ಇಳಿದು ಈಜಾಡುವುದು ಬಿಡಿ, ನೀರಿನ ಬಳಿ ಹೋಗಲೂ ಕೂಡ ಕಷ್ಟವಾಗುತ್ತದೆ. ನೀರಿನಲ್ಲಿ ಸೇರಿರುವ ಕೆಟ್ಟ ರಾಸಾಯನಿಕ ಪದಾರ್ಥಗಳು ಅದರ ವಾಸನೆಗೇ ನೀವು ಅಲ್ಲಿಂದ ಓಡಿ ಬರುತ್ತೀರಿ. ಹೀಗಿದ್ದೂ ಬೇರೆ ಸುದ್ದಿಗಳು ಹೇಗೆ ಪ್ರಸಾರವಾಯಿತು ಎಂದು ನನಗೆ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.
ಅಂತೆಯೇ ತಾವು ಹಾಕಿದ್ದ ಅಂಡರ್ ವಾಟರ್ ಫೋಟೋಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದು ನನ್ನ ಸ್ನೇಹಿತರ ಮನೆಯಲ್ಲಿದ್ದ ಸ್ವಿಮ್ಮಿಂಗ್ ಪೂಲ್ ನಲ್ಲಿ ತೆಗೆಸಿದ್ದ ಫೋಟೋಗಳು ಎಂದು ರಶ್ಮಿಕಾ ಹೇಳಿದ್ದಾರೆ.
ಅಂತೆಯೇ ತಮ್ಮ ಪೋಸ್ಟ್ ಗೆ ಮತ್ತು ಜಾಗೃತಿಗೆ ಬೇರೆ ಯಾವ ನಟರು ಬೆಂಬಲ ಸೂಚಿಸಿದ್ದಾರೆ ಎಂದು ನನಗೆ ತಿಳಿದಿಲ್ಲ. ಆದರೆ ಕೆರೆಗಳನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಅಗತ್ಯ ಬಿದ್ದರೆ ನಾನು ಕೂಡ ಧನಿ ಎತ್ತುತ್ತೇನೆ. ಇದು ರಾತ್ರೋ ರಾತ್ರಿ ನಡೆಯುವ ಕೆಲಸವಲ್ಲ. ಇದಕ್ಕಾಗಿ ಎಲ್ಲರೂ ಕೈ ಜೋಡಿಸಬೇಕು. ಕೆರೆಗಳಿಗೆ ಕಲ್ಮಶಗಳನ್ನು ಬಿಡುವುದನ್ನು ತಪ್ಪಿಸಬೇಕು. ಅಂತೆಯೇ ಕಾರ್ಖಾನೆಗಳಿಂದ ಬರುವ ವಿಷಕಾರಿ ಪದಾರ್ಥಗಳು ಕೆರೆಗೆ ಸೇರದಂತೆ ನೋಡಿಕೊಳ್ಳಬೇಕು ಎಂದು ರಶ್ಮಿಕಾ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos