ಬೆಂಗಳೂರು: ದೇಶಾದ್ಯಂತ ನಾಳೆ ಭರ್ಜರಿಯಾಗಿ ತೆರೆಗಪ್ಪಳಿಸಲಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರಕ್ಕೆ ಕೋರ್ಟ್ ಮಧ್ಯತರ ತಡೆಯಾಜ್ಞೆ ನೀಡಿದ್ದು ಚಿತ್ರತಂಡಕ್ಕೆ ಕಂಟಕವಾಗಿತ್ತು. ಆದರೆ ಇದೀಗ ನಿರ್ಮಾಪಕ ವಿಜಯ್ ಕಿರಗಂದೂರು ನಾಳೆ ಎಂದಿನಂತೆ ಚಿತ್ರ ಬಿಡುಗಡೆಯಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ವಿಜಯ್ ಕಿರಂಗದೂರು ಅವರು ವಾಟ್ಸ್ ಆ್ಯಪ್ ವಿಡಿಯೋ ಮಾಡಿದ್ದು ಅದರಲ್ಲಿ ನಾಳೆ ಎಂದಿನಂತೆ ಚಿತ್ರ ಬಿಡುಗಡೆಯಾಗಲಿದೆ. ವದಂತಿಗಳಿಗೆ ಅಭಿಮಾನಿಗಳು ಕಿಡಿಗೋಡುವ ಅವಶ್ಯಕತೆ ಇಲ್ಲ. ಚಿತ್ರದ ಟಿಕೇಟ್ ಖರೀದಿಸಿರುವ ಅಭಿಮಾನಿಗಳು ನಿರ್ಭಿತವಾಗಿ ನಾಳೆ ಚಿತ್ರವನ್ನು ನೋಡಬಹುದು ಎಂದು ಹೇಳಿದ್ದಾರೆ.
ಇನ್ನು ಕೆಜಿಎಫ್ ಚಿತ್ರದ ಬಿಡುಗಡೆಗೆ ಬೆಂಗಳೂರಿನ 10ನೇ ಸಿಟಿ ಸಿವಿಲ್ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ ನಂತರ ರಾಕಿಂಗ್ ಸ್ಟಾರ್ ಯಶ್ ಟ್ವೀಟ್ ಮಾಡಿ ಸಿನಿಪ್ರಿಯರು ತಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲು ಟಿಕೆಟ್ ಬುಕ್ ಮಾಡಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ.
ಒಟ್ಟಿನಲ್ಲಿ ದೇಶಾದ್ಯಂತ ತೀವ್ರ ಕುತೂಲಹ ಹುಟ್ಟಿಸಿದ್ದ ಕನ್ನಡದ ಚಿತ್ರವೊಂದಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದ್ದು ಚಿತ್ರತಂಡಕ್ಕೆ ಕೊಂಚ ಹಿನ್ನಡೆಯಾಗಿತ್ತು. ಆದರೆ ಇದೀಗ ಚಿತ್ರತಂಡ ನಾಳೆ ಚಿತ್ರ ಬಿಡುಗಡೆಯಾಗುತ್ತಿದೆ. ಎಂದಿನಂತೆ ಅಭಿಮಾನಿಗಳು ಚಿತ್ರವನ್ನು ವೀಕ್ಷಿಸಬಹುದು ಎಂದು ಹೇಳಿದ್ದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.