ಬೆಂಗಳೂರು: ಕಜಿಎಫ್ ಚಿತ್ರ ಬಿಡುಗಡೆಯಾಗಿ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡ ಬೆನ್ನಲ್ಲೇ ಇದೀಗ ಎಲ್ಲರ ಚಿತ್ತ ಕೆಜಿಎಫ್ ಪಾರ್ಟ್ 2 ನತ್ತ ನೆಟ್ಟಿದ್ದು, ಪಾರ್ಟ್ 2 ರಿಲೀಸ್ ಡೇಟ್ ಯಾವಾಗ ಎಂಬ ಪ್ರಶ್ನೆಗೆ ನಟ ಯಶ್ ಪ್ರತಿಕ್ರಿಯೆ ನೀಡಿದ್ದಾರೆ.
ಚಿತ್ರ ಯಶಸ್ಸು ಸಾಧಿಸಿದ ಬಳಿಕ ಇದೇ ಮೊದಲ ಬಾರಿಗೆ ಪೇಸ್ ಬುಕ್ ಲೈವ್ ಮೂಲಕ ಅಭಿಮಾನಿಗಳೊಂದಿಗೆ ಮಾತನಾಡಿದ ಯಶ್, ಕೆಜಿಎಫ್ ಚಿತ್ರದ ಈ ಯಶಸ್ಸಿಗೆ ಅಭಿಮಾನಿಗಳ ಪ್ರೋತ್ಸಾಹವೇ ಕಾರಣ, ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಹೇಳಿದರು.
ಅಂತೆಯೇ ಕೆಜಿಎಫ್ ಚಾಪ್ಟರ್-2 ರಿಲೀಸ್ ಡೇಟ್ ಕೇಳಿದ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಯಶ್, ಸದ್ಯ ಚಾಪ್ಟರ್-1 ಬಂದಿದೆ ಜನ ಎಂಜಾಯ್ ಮಾಡಿ, ಚಾಪ್ಟರ್-2ಗಿನ್ನೂ ತುಂಬಾನೇ ಟೈಮ್ ಇದೆ. ಈಗಿನ್ನೂ ಚಾಪ್ಟರ್ 1 ಬಂದಿದೆ. ಈ ಸಿನಿಮಾ ನೋಡಿ. ಪಾರ್ಟ್-2 ಆದಷ್ಟು ಬೇಗ ಶುರು ಮಾಡ್ತೀವಿ. ಅದಕ್ಕೆ ಅದರದ್ದೇ ಆದ ಜವಾಬ್ದಾರಿಗಳಿವೆ. ಎಲ್ಲವೂ ಪಕ್ಕಾ ಆಗಿದೆ ಅಂತ ಗೊತ್ತಾದ ಮೇಲೆ ಆ ಪಾರ್ಟ್-2 ಶೂಟಿಂಗ್ ಶುರು ಮಾಡುತ್ತೇವೆ ಎಂದು ಹೇಳಿದರು.
ಅಂತೆಯೇ ಕೆಜಿಎಫ್ ಸಿನಿಮಾವನ್ನ ತೆಲುಗಿನಲ್ಲಿ ನೋಡಿ ಖುಷಿ ಪಟ್ಟ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ ಯಶ್, ತಮ್ಮ ಪ್ರಯತ್ನಕ್ಕೆ ಬೆಂಬಲಿಸಿದಕ್ಕೆ ಕೃತಜ್ಞತೆ ಸಲ್ಲಿಸಿದರು. ಜೊತೆಗೆ ಅಭಿಮಾನಿಗಳ ಜೊತೆಗೆ ಚಿತ್ರ ಹಂಚಿಕೆ ಮಾಡಿದ ‘ವಾರಾಹಿ ಫಿಲಂಸ್ಗೆ ಸಾಯಿ ಕೊರಾಪಾಟಿ ಅವರಿಗೆ ಧನ್ಯವಾದಗಳನ್ನ ಹೇಳೋಕೆ ಇಷ್ಟ ಪಡ್ತೀನಿ.ಕನ್ನಡಿಗರು ಸಾಕಷ್ಟು ತೆಲುಗು ಸಿನಿಮಾಗಳಿಗೆ ಸಪೋರ್ಟ್ ಮಾಡಿದ್ದಾರೆ. ನಾವೂ ಕೂಡ ತೆಲುಗು ಸಿನಿಮಾಗಳನ್ನ ಪ್ರೀತಿ ಮಾಡ್ತೀವಿ, ನೀವೀಗ ಕನ್ನಡದ ಕೆಜಿಎಫ್ ನ ಮೆಚ್ಚಿದ್ದೀರಿ. ನಿಮ್ಮ ಸಪೋರ್ಟ್ ಕಂಡು ನಮಗೂ ಖುಷಿ ಇದೆ ಎಂದು ಯಶ್ ಹೇಳಿದರು.