ಕಮಲ್ ಹಾಸನ್ ಮತ್ತು ನಟ ರಜನಿಕಾಂತ್
ಚೆನ್ನೈ: ನಮ್ಮ ಹಾದಿ ಹಾಗೂ ಶೈಲಿ ಬೇರೆಯಾಗಿರಬಹುದು. ಆದರೆ, ನಮ್ಮಿಬ್ಬರ ಗುರಿ ಒಂದೇ ಆಗಿದೆ. ಆದು ಜನರಿಗೆ ಒಳ್ಳೆಯದು ಮಾಡಬೇಕೆಂಬುದು ಎಂದು ಹೊಸ ಪಕ್ಷ ಸ್ಥಾಪನೆ ಮಾಡಿರುವ ಕಮಲ್ ಹಾಸನ್ ಕುರಿತು ನಟ ರಜನಿಕಾಂತ್ ಅವರು ಶುಕ್ರವಾರ ಹೇಳಿದ್ದಾರೆ.
ಕಮಲ್ ಹಾಸನ್ ಅವರ ಹೊಸ ಪಕ್ಷ ಸ್ಥಾಪನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಮಲ್ ಹಾಸನ್ ಅವರು ನಡೆಸಿದ್ದ ಸಾರ್ವಜನಿಕ ಸಭೆಯನ್ನು ನೋಡಿದೆ. ಬಹಳ ಚೆನ್ನಾಗಿತ್ತು. ನಮ್ಮಿಬ್ಬರ ಹಾದಿ ಹಾಗೂ ಶೈಲಿ ಬೇರೆಯಾಗಿರಬಹುದು. ಆದರೆ, ಇಬ್ಬರ ಗುರಿ ಒಂದೇ ಆಗಿದೆ. ಅದು ಜನರಿಗೆ ಒಳಿತನ್ನು ಮಾಡಬೇಕೆಂಬುದು ಎಂದು ಹೇಳಿದ್ದಾರೆ.
ಇದೇ ವೇಳೆ ಕಮಲ್ ಹಾಸನ್ ಅವರನ್ನು ಹೊಗಳಿರುವ ಅವರು, ಕಮಲ್ ಹಾಸನ್ ಅವರು ಸಾಮರ್ಥ್ಯವಿದ್ದು, ಜನರ ವಿಶ್ವಾಸವನ್ನು ಅವರು ಗೆಲ್ಲಲಿದ್ದಾರೆಂದು ತಿಳಿಸಿದ್ದಾರೆ.
ಬಳಿಕ ಕಾವೇರಿ ವಿವಾದ ಸಂಬಂಧ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಕುರಿತು ತಮಿಳುನಾಡು ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಯನ್ನು ರಜನಿಕಾಂತ್ ಅವರು ಸ್ವಾಗತಿಸಿದ್ದಾರೆ.
ಫೆ.1 ರಂದು ನಟ ಕಮಲ್ ಹಾಸನ್ ಅವರು ತಮ್ಮ ಹೊಸ ಪಕ್ಷವನ್ನು ಘೋಷಣೆ ಮಾಡಿದ್ದರು, ಮಕ್ಕಳ ನಿಧಿ ಮಯಂ(ಜನರ ನ್ಯಾಯ ಕೇಂದ್ರ) ಎಂಬ ಪಕ್ಷದ ಹೆಸರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ಘೋಷಣೆ ಮಾಡಿದ್ದರು.