ತೆರೆಗೆ ಬರಲು ಸಿದ್ಧವಾಗಿದೆ ಡಬಲ್ ಇಂಜಿನ್
ಚಂದ್ರಮೋಹನ್ ನಿರ್ದೇಶನದ ಮನರಂಜನಾತ್ಮಕ ಚಿತ್ರ 'ಡಬಲ್ ಇಂಜಿನ್' ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.
2015 ಚಿತ್ರೀಕರಣ ಆರಂಭಿಸಿದ್ದ ಈ ಚಿತ್ರ ನೋಟು ನಿಷೇಧಗೊಂಡ ಹಿನ್ನಲೆ ಬಿಡುಗಡೆಯಾಗಿರಲಿಲ್ಲ. ಸಾಕಷ್ಟು ಬೆಳವಣಿಗೆಗಳ ಬಳಿಕ ಇದೀಗ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.
ಚಿತ್ರದಲ್ಲಿ ಚಿಕ್ಕಣ್ಣ, ಅಶೋಕ್ ಶರ್ಮಾ ಮತ್ತು ಪ್ರಭು ಮುಂದ್ಕುರ್ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಪಾತ್ರಗಳ ಕುರಿತಂತೆ ಮನಬಿಚ್ಚಿ ಮಾತನಾಡಿದ್ದಾರೆ.
ಚಿತ್ರ ಕುರಿತಂತೆ ಮಾತನಾಡಿರುವ ಚಿಕ್ಕಣ್ಣ ಅವರು, ಡಬಲ್ ಇಂಜಿನ್ ಚಿತ್ರದಲ್ಲಿ ಗಂಭೀರ ವಿಚಾರಗಳನ್ನು ಎಳೆಎಳೆಯಾಗಿ ವಿವರಿಸಲಾಗಿದೆ. ಹಳ್ಳಿ ಹುಡುಗರು ಶ್ರೀಮಂತರಾಗಲು ಎನೆಲ್ಲಾ ಶಾರ್ಟ್'ಕಟ್ ಗಳನ್ನು ಹಿಡಿಯುತ್ತಾರೆ, ಎಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂಬುದು ಚಿತ್ರದ ಕಥೆಯಾಗಿದೆ. ಚಿತ್ರದ ಮಧ್ಯೆ ಮಧ್ಯೆ ಜನರನ್ನು ನಗಿಸುವ ಪಾತ್ರವನ್ನು ನಿಭಾಯಿಸುತ್ತಿದ್ದೇನೆ. ಚಿತ್ರದಲ್ಲಿ ಒಂದು ಸಂದೇಶ ಕೂಡ ಇದ್ದು, ಇದು ಜನರ ಮನ ಕಲಕುವಂತೆ ಮಾಡುತ್ತದೆ. ಜನರನ್ನು ತಲುಪಲು ಇದು ಉತ್ತಮವಾದ ದಾರಿಯಾಗಿದೆ. ಇಂತಹ ಚಿತ್ರದಲ್ಲಿ ನಾನು ಪಾತ್ರ ಮಾಡುತ್ತಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.
ಬಳಿಕ ಸುಮನಾ ರಂಗನಾಥ್ ಅವರೊಂದಿಗಿನ ನಟನೆ ಕುರಿತಂತೆ ಮಾತನಾಡಿದ ಅವರು, ಸುಮನಾ ಅವರು ಹಿರಿಯ ನಟಿಯಂತೆ ಎಂದಿಗೂ ನಡೆದುಕೊಳ್ಳಲಿಲ್ಲ. ಅವರೊಂದಿಗೆ ಕೆಲಸ ಮಾಡುವುದು ಅತ್ಯುತ್ತಮವಾಗಿತ್ತು ಎಂದು ತಿಳಿಸಿದ್ದಾರೆ.
ಪ್ರಭು ಮುಂದ್ಕುರ್ ಮಾತನಾಡಿ, ಮಂಡ್ಯದಲ್ಲಿ ಆಡಿಷನ್ ಕರೆಯಲಾಗಿತ್ತು. ಆಡಿಷನ್ ನಲ್ಲಿ ನಾನು ಪಾಲ್ಗೊಂಡಿದ್ದೆ. ಆಡಿಷನ್ ಬಳಿಕ ನನಗೆ ಯಾವುದೇ ಮಾಹಿತಿಗಳು ತಿಳಿದಿರಲಿಲ್ಲ. ಚಿತ್ರ ಕುರಿತ ಲೇಖನವೊಂದನ್ನು ಪತ್ರಿಕೆಯಲ್ಲಿ ನೋಡಿದ್ದೆ. ಈ ವೇಳೆ ಚಿತ್ರದಲ್ಲಿ ನಾನು ಕೂಡ ಪಾತ್ರ ಮಾಡುತ್ತಿದ್ದೇನೆಂಬುದು ತಿಳಿಯಿತು ಎಂದು ಹೇಳಿದ್ದಾರೆ.
ಚಿಕ್ಕಣ್ಣ ಅವರನ್ನು ಮಾಸ್ಟರ್ ಪೀಸ್ ಚಿತ್ರದಲ್ಲಿ ನೋಡಿದ್ದೆ, ಅವರೊಂದಿಗೆ ಕೆಲಸ ಮಾಡಲು ಬಹಳ ಉತ್ಸುಕನಾಗಿದ್ದೆ. ಚಿತ್ರರಂಗ ಅತ್ಯುತ್ತಮ ಹಾಸ್ಯ ಕಲಾವಿದರು ಹಾಗೂ ನಟ-ನಟಿಯರೊಂದಿಗೆ ಕೆಲಸ ಮಾಡುತ್ತಿರುವುದು ನನ್ನ ಅದೃಷ್ಟ. ಚಿತ್ರದಲ್ಲಿ ದತ್ತಣ್ಣ, ಸಾಧು ಕೋಕಿಲಾ, ಪದ್ಮಾವಸಂತಿ, ಶೋಭರಾಜ್, ಅಚ್ಯುತ್ ಕುಮಾರ್, ಬಿರಾದರ್ ಸೇರಿದಂತೆ ಇನ್ನಿತರೆ ಕಲಾವಿದರು ನಟಿಸಿದ್ದಾರೆಂದಿದ್ದಾರೆ.
ಮಿಸ್ಟರ್ ಆ್ಯಂಡ್ ಮಿಸಸ್ ರಾಮಚಾರಿ ಚಿತ್ರ ನೋಡಿದ ಬಳಿಕ ಅಶೋಕ್ ಶರ್ಮಾ ಅವರನ್ನು ಡಬಲ್ ಇಂಜಿನ್ ಚಿತ್ರದಲ್ಲಿ ನಟಿಸುವಂತೆ 2014ರಲ್ಲಿ ಮಾತುಕತೆ ನಡೆಸಲಾಗಿತ್ತು. 1 ವರ್ಷದ ಬಳಿಕ ಅಶೋಕ್ ಪಾತ್ರ ಮಾಡುವುದಾಗಿ ದೃಢಪಡಿಸಿದ್ದರು ಎಂದು ಚಂದ್ರ ಮೋಹನ್ ಅವರು ಹೇಳಿದ್ದಾರೆ.
ಚಿತ್ರದ ಪ್ರತೀಯೊಂದು ದೃಶ್ಯ ಕೂಡ ಜನರನ್ನು ನಗಿಸುತ್ತದೆ. ಹೀಗಾಗಿಯೇ ಚಿತ್ರವನ್ನು ಒಪ್ಪಿಕೊಂಡೆ. ಚಿಕ್ಕಣ್ಣ ಅವರೊಂದಿಗೆ ನಟಿಸಲು ಬಹಳ ಸಂತೋಷವಾಗುತ್ತಿದೆ ಎಂದು ಅಶೋಕ್ ಅವರು ತಿಳಿಸಿದ್ದಾರೆ.