ಸಿನಿಮಾ ಸುದ್ದಿ

ಕನ್ನಡದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಲು 11 ವರ್ಷ ಕಾಯಬೇಕಾಯಿತು: ಲಿಖಿತ್ ಶೆಟ್ಟಿ

Sumana Upadhyaya

ಕನ್ನಡದಲ್ಲಿ ನಾಳೆ ಬಿಡುಗಡೆಯಾಗುತ್ತಿರುವ ಸಂಕಷ್ಟಕರ ಗಣಪತಿ ಚಿತ್ರ ಅಪಾರ ನಿರೀಕ್ಷೆ ಹುಟ್ಟಿಸಿದೆ. ಇದರ ನಾಯಕ ಲಿಖಿತ್ ಶೆಟ್ಟಿ ಒಂದು ದಿನ ತನ್ನ ಸ್ನೇಹಿತನೊಂದಿಗೆ ಬೇಲ್ ಪುರಿ ತಟ್ಟೆ ಮುಂದೆ ಇಟ್ಟುಕೊಂಡು ತಿನ್ನುತ್ತಾ ಮಾತನಾಡುತ್ತಿರುವಾಗ ಹುಟ್ಟಿಕೊಂಡ ಕಥೆಯಂತೆ.

ಈ ಬಗ್ಗೆ ಲಿಖಿತ್ ಶೆಟ್ಟಿಯೇ ಹೇಳಿಕೊಂಡಿದ್ದಾರೆ. ''ಏಲಿಯನ್ ಹ್ಯಾಂಡ್ ಸಿಂಡ್ರೋಮ್ ಬಗ್ಗೆ ಸ್ನೇಹಿತನ ಬಳಿ ಮಾತನಾಡುತ್ತಿದ್ದ ವಿಷಯ ಒಂದು ಕಮರ್ಷಿಯಲ್ ಚಿತ್ರವಾಗುತ್ತದೆ ಎಂದು ಭಾವಿಸಿಯೇ ಇರಲಿಲ್ಲ. ಹೀಗೇ ಮಾತನಾಡುತ್ತಿರುವಾಗ ಸ್ನೇಹಿತ ಹಠಾತ್ತನೆ ನಮ್ಮ ಕೈಯ ಸ್ವಾಧೀನ ಕಳೆದುಕೊಂಡರೆ ನಾವು ಏನು ಮಾಡುತ್ತೇವೆ ಎಂದು ಕೇಳಿದ. ಇದನ್ನು ಸಿನಿಮಾದ ದೃಷ್ಟಿಕೋನವಿಟ್ಟುಕೊಂಡು ಕೇಳುತ್ತಿದ್ದೇನೆ ಎಂದು ಕೂಡ ಹೇಳಿದ. ಆ ಸ್ನೇಹಿತ ಬೇರೆ ಯಾರೂ ಅಲ್ಲ, ಚಿತ್ರದ ನಿರ್ದೇಶಕ ಅರ್ಜುನ್ ಕುಮಾರ್. ಇದು ಸಿನಿಮಾ ಮಾಡಲು ಒಂದು ಒಳ್ಳೆಯ ವಿಷಯ ಎಂದು ನಮಗಿಬ್ಬರಿಗೆ ಅನಿಸಿತು. ನಂತರ ಹಲವು ಸುತ್ತಿನ ಮಾತುಕತೆ ನಡೆದು ಸಿನಿಮಾ ತಯಾರಿಸಲು ಆರಂಭಿಸಿದೆವು''

ಇಂದಿನ ಪ್ರೇಕ್ಷಕರಿಗೆ ಚಿತ್ರ ಇಷ್ಟವಾಗಬಹುದು ಎನ್ನುತ್ತಾರೆ ಲಿಖಿತ್ ಶೆಟ್ಟಿ. ಚಿತ್ರ ನೋಡಿದವರಿಗೆ ಹೊಸ ಭಾವನೆ ಹುಟ್ಟಿಸುತ್ತದೆ ಎಂದರು. ತುಳು ಚಿತ್ರರಂಗದಲ್ಲಿ ಒರಿಯರ್ದೊರಿ ಅಸಲ್ ಮತ್ತು ಮದಿಮೆ ಎಂಬ ಯಶಸ್ವಿ ಚಿತ್ರದ ಮೂಲಕ ಗುರುತಿಸಿಕೊಂಡಿರುವ ಲಿಖಿತ್ ಶೆಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ನಾಯಕನ ಪಾತ್ರ ಸಿಗಲು 11 ವರ್ಷ ಕಾಯಬೇಕಾಯಿತಂತೆ.

2007ರಲ್ಲಿ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶಿಸಿದ ಲಿಖಿತ್ ಶೆಟ್ಟಿ, ಜೊತೆಗೆ ಇಂಟೀರಿಯರ್ ಡಿಸೈನ್ ಕೂಡ ಕಲಿತರು. ಸಂಕಷ್ಟಕರ ಗಣಪತಿ ಚಿತ್ರದ ಪಾತ್ರ ಅವರಿಗೆ ಸವಾಲು ಎಂದು ಅನಿಸಲಿಲ್ಲವಂತೆ. ಏಕೆಂದರೆ ಅದಕ್ಕೆ ಮೂರು ವರ್ಷದ ಸಿದ್ದತೆ ಮಾಡಿಕೊಂಡಿದ್ದಾರೆ. ಕೇವಲ ನನ್ನ ಪಾತ್ರಗಳಲ್ಲದೆ ಬೇರೆ ಕಲಾವಿದರ ಪಾತ್ರಗಳು ಕೂಡ ಚೆನ್ನಾಗಿ ಗೊತ್ತಾಗಿತ್ತು. ಪಾತ್ರಕ್ಕಾಗಿ ಆಹಾರದ ಮೇಲೆ ಕೂಡ ಕಟ್ಟುನಿಟ್ಟು ಪಾಲಿಸಿದ್ದೇನೆ ಎಂದರು. 

ಸಂಕಷ್ಟಕರ ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ಚಿತ್ರ ಒಪ್ಪಿಕೊಳ್ಳಲು ಲಿಖಿತ್ ಶೆಟ್ಟಿ ನಿರ್ಧರಿಸಿದ್ದಾರೆ. 

SCROLL FOR NEXT