ಕೇರಳ-ಕೇರಳಂ: ಯಾವುದೇ ಪ್ರಯೋಜನವಿಲ್ಲ, ಹೆಸರು ಬದಲಿಸುವ ಬದಲು ಹೆಚ್ಚಿನ ಅನುದಾನ ಘೋಷಿಸಿ; ಅಚ್ಚರಿ ಮೂಡಿಸಿದ ಶಶಿ ತರೂರ್!

‘ಕೇರಲೈಟ್’ ಮತ್ತು ‘ಕೇರಳನ್’ ಪದಗಳಿಗೆ ಈಗ ಏನಾಗುತ್ತದೆ? ‘ಕೇರಳಮೈಟ್’ ಎಂದು ಕರೆಯಲಾಗುತ್ತದೆಯೇ? ‘ಕೇರಳಮೈಟ್’ ಒಂದು ಸೂಕ್ಷ್ಮಜೀವಿಯಂತೆ ಧ್ವನಿಸುತ್ತದೆ. ಅಂತೆಯೇ, ‘ಕೇರಳಮೈನ್’ ಪದವು ಅಪರೂಪದ ಭೂಮಿಯ ಖನಿಜದಂತೆ ಧ್ವನಿಸುತ್ತದೆ…!
Shashi Tharoor
ಶಶಿ ತರೂರ್
Updated on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಕೇರಳದ ಹೆಸರನ್ನು ‘ಕೇರಳಂ’ ಎಂದು ಮರುನಾಮಕರಣ ಮಾಡುವ ಕೇರಳ ಸರ್ಕಾರದ ಪ್ರಸ್ತಾಪವನ್ನು ಅನುಮೋದಿಸಿದೆ. ಇನ್ನುಮುಂದೆ, ಕೇರಳವು ಕೇರಳಂ ಆಗಲಿದೆ.

ಕೇರಳ ಹೆಸರನ್ನು ಕೇರಳಂ ಎಂದು ಮರುನಾಮಕರಣ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಇಡೀ ರಾಜ್ಯ ಸಂಭ್ರಮಿಸುತ್ತಿದೆ. ಆದರೆ ತಿರುವನಂತಪುರಂ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಮಾತ್ರ ಹೆಸರು ಬದಲಾವಣೆ ನಿರ್ಧಾರವನ್ನು ವಿರೋಧಿಸಿದ್ದಾರೆ. ಈ ಹೆಸರು ಬದಲಾವಣೆಗೆ ಪ್ರತಿಕ್ರಿಯಿಸಿದ ಕೇರಳದ ಕಾಂಗ್ರೆಸ್ ಸಂಸದ ಶಶಿ ತರೂರ್, “ಇಂಗ್ಲಿಷ್ ಮಾತನಾಡುವವರು ಈಗ ರಾಜ್ಯದ ನಿವಾಸಿಗಳನ್ನು ಏನೆಂದು ಕರೆಯುತ್ತಾರೆ?

‘ಕೇರಲೈಟ್’ ಮತ್ತು ‘ಕೇರಳನ್’ ಪದಗಳಿಗೆ ಈಗ ಏನಾಗುತ್ತದೆ? ‘ಕೇರಳಮೈಟ್’ ಎಂದು ಕರೆಯಲಾಗುತ್ತದೆಯೇ? ‘ಕೇರಳಮೈಟ್’ ಒಂದು ಸೂಕ್ಷ್ಮಜೀವಿಯಂತೆ ಧ್ವನಿಸುತ್ತದೆ. ಅಂತೆಯೇ, ‘ಕೇರಳಮೈನ್’ ಪದವು ಅಪರೂಪದ ಭೂಮಿಯ ಖನಿಜದಂತೆ ಧ್ವನಿಸುತ್ತದೆ…! ಎಂದಿದ್ದಾರೆ. ಒಳ್ಳೆಯದಾಗಲಿ, ಕೇರಳ ಮುಖ್ಯಮಂತ್ರಿಗಳು ಚುನಾವಣೆಗಾಗಿ ಹೊಸ ಪದಗಳ ಸ್ಪರ್ಧೆಯನ್ನು ಪ್ರಾರಂಭಿಸಲು ಬಯಸಬಹುದು ಎಂದು ವ್ಯಂಗ್ಯವಾಡಿದ್ದಾರೆ.

ಕೇರಳದ ಹೆಸರನ್ನು ಕೇರಳಂ ಎಂದು ಮರುನಾಮಕರಣ ಮಾಡುವ ಬದಲು, ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ಅನುದಾನ ಮತ್ತು ಹೆಚ್ಚಿನ ಯೋಜನೆಗಳನ್ನು ಘೋಷಿಸಿದ್ದರೆ ಉತ್ತಮವಾಗಿತ್ತು. ಕೇಂದ್ರ ಸರ್ಕಾರ ನಮಗೆ ಏಮ್ಸ್‌ ಸೇರಿದಂತೆ ಯಾವುದೇ ಹೊಸ ಸಂಸ್ಥೆಗಳನ್ನು ನೀಡಿಲ್ಲ. ಅವರು ನಮಗೆ ಯಾವುದೇ ಹೊಸ ಯೋಜನೆಗಳನ್ನು ನೀಡಿಲ್ಲ. ಆದರೆ ರಾಜ್ಯದ ಹೆಸರು ಬದಲಾವಣೆಯನ್ನೇ ಬಹುದೊಡ್ಡ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಶಶಿ ತರೂರ್‌ ಅಸಮಾಧಾನ ಹೊರಹಾಕಿದ್ದಾರೆ.

ಕೇರಳದ ಹೆಸರನ್ನು ಕೇರಳಂ ಎಂದು ಮರುನಾಮಕರಣ ಮಾಡಲು 2024ರ ಜೂನ್ 24ರಂದು ಕೇರಳ ಸರ್ಕಾರವು ಸಲ್ಲಿಸಿದ್ದ ಪ್ರಸ್ತಾಪವನ್ನು ಬರೋಬ್ಬರಿ 2 ವರ್ಷಗಳ ನಂತರ ಕೇಂದ್ರ ಸಂಪುಟ ಸಭೆಯಲ್ಲಿ ಅಂಗೀಕರಿಸಲಾಗಿದೆ. ಕೆಲವೇ ವಾರಗಳಲ್ಲಿ (ಏಪ್ರಿಲ್-ಮೇ) ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ ಕೇಂದ್ರ ಸರ್ಕಾರವು ಹೆಸರು ಬದಲಾವಣೆಗೆ ಅನುಮೋದಿಸಿದೆ.

ಇನ್ನು ರಾಜ್ಯದ ಎಡರಂಗ ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿರುವ ಶಶಿ ತರೂರ್‌, "ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ಯೋಜನೆಗಳಿಗಾಗಿ ಪ್ರಯತ್ನಿಸದೇ, ಕೇಂದ್ರ ಸರ್ಕಾರದ ಜೊತೆಗೂಡಿ ಕೇರಳವನ್ನು ಕೇರಳಂ ಎಂದು ಮರುನಾಮಕರಣ ಮಾಡುವುದರಲ್ಲಿ ಕಾಲಹರಣ ಮಾಡುತ್ತಿದೆ" ಎಂದು ಕಿಡಿಕಾರಿದ್ದಾರೆ.

Shashi Tharoor
ಕೇರಳ ರಾಜ್ಯದ ಹೆಸರು ಬದಲಾವಣೆಗೆ ಕೇಂದ್ರ ಸಂಪುಟದ ಅನುಮೋದನೆ; ಹೊಸ ಹೆಸರೇನು ಗೊತ್ತೆ?

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com