ಗಯ್ಯಾಳಿ ಸುಕೃತಾ ಅಭಿನಯದ ಮೇಘ ಅಲಿಯಾಸ್ ಮ್ಯಾಗಿ ಮುಂದಿನ ವಾರ ತೆರೆಗೆ ಬರಲಿದ್ದು ಚಿತ್ರ ಸೆಟ್ಟೇರಿದಾಗಿನಿಂದ ನಾಯಕಿ ಸುಕೃತಾ ಲುಕ್ ಬಗ್ಗೆ ಹೆಚ್ಚಿನ ಟಾಕ್ ಶುರುವಾಗಿತ್ತು.
ಇದೇ ಮೊದಲ ಬಾರಿಗೆ ಸುಕೃತಾ ಟಾಮ್ ಬಾಯ್ ಅವತಾರದಲ್ಲಿ ಕಾಣಿಸಿಕೊಂಡು ನೋಡುಗರ ಹುಬ್ಬೇರುವಂತೆ ಮಾಡಿದ್ದಾರೆ. ಇನ್ನು ಜೂನ್ 15ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು ಸುಕೃತಾರ ರಗಡ್ ಲುಕ್ ಜನರನ್ನು ಸೆಳೆಯುತ್ತದೆ ಎಂಬ ವಿಶ್ವಾಸದಲ್ಲಿದೆ ಚಿತ್ರತಂಡ.
ಮೊದಲಿಗೆ ಮೇಘ ಅಲಿಯಾಸ್ ಮ್ಯಾಗಿ ಚಿತ್ರವನ್ನು ಒಪ್ಪಿಕೊಳ್ಳುವುದೋ ಬೇಡವೋ ಎಂದು ಸುಮ್ಮನಿದ್ದೆ ಆದರೆ ಅದನ್ನೇ ಚಾಲೆಂಜ್ ಆಗಿ ಸ್ವೀಕರಿಸಿ ಚಿತ್ರಕ್ಕೆ ನ್ಯಾಯಒದಗಿಸಿದ್ದೇನೆ. ಚಿತ್ರದಲ್ಲಿ ನನ್ನದು ಟಾಮ್ ಬಾಯ್ ಪಾತ್ರ. ಯಾರ ಮಾತನ್ನೂ ಕೇಳದ, ಯಾರ ಮುಲಾಜಿಗೂ ಬಗ್ಗದ ಹುಡುಗಿ ಪಾತ್ರ. ಸಿಗರೇಟ್ ಸೇದುವುದು, ಬೈಕ್ ಓಡಿಸುವುದು, ಫೈಟ್ ಸಹ ಮಾಡಿದ್ದೇನೆ. ಈ ರೀತಿಯ ಪಾತ್ರ ನನಗೆ ಹೊಂದುತ್ತೋ ಇಲ್ಲವೆ ಎಂದು ಅನುಮಾನಿಸಿದ್ದೆ ಎಂದು ಸುಕೃತಾ ಹೇಳಿದ್ದಾರೆ.
ಅಗಮ್ಯ ಹಾರರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ವಿಶಾಲ್ ಪುಟ್ಟಣ್ಣ ಮೇಘ ಅಲಿಯಾಸ್ ಮ್ಯಾಗಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ವಿನಯ್ ಕುಮಾರ್ ಬಂಡವಾಳ ಹೂಡಿದ್ದಾರೆ.