ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿನಯದ 'ದಿ ವಿಲನ್ 'ಟೀಸರ್ ಬಿಡುಗಡೆಯಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಗೊತ್ತೇ ಇದೆ. ಟೀಸರ್ ಬಿಡುಗಡೆಯಾದ ಕೇವಲ 15 ಗಂಟೆಗಳಲ್ಲಿ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ಟೀಸರ್ ಬಿಡುಗಡೆಯಾಗಿ ಎರಡು ದಿನ ಕಳೆದ ನಂತರ ಇನ್ನೂ ಟ್ರೆಂಡಿಂಗ್ ಆಗಿದ್ದು ದಾಖಲೆ ಸೃಷ್ಟಿಸಿದೆ. ಟೀಸರ್ ನಲ್ಲಿ ಶಿವಣ್ಣನನ್ನು ರಾಮ ಮತ್ತು ರಾವಣನನ್ನಾಗಿ ಬಿಂಬಿಸಲಾಗಿದೆ. ಸುದೀಪ್ ರಾವಣನ ಕಥೆಯನ್ನು ವಿವರಿಸುತ್ತಾರೆ. ಇವರ ಪಾತ್ರಗಳ ಕುರಿತು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ ಎನ್ನುತ್ತಾರೆ ನಿರ್ದೇಶಕ ಪ್ರೇಮ್. ಸಿನಿರಸಿಕರಿಂದ ಸಿಕ್ಕಿರುವ ಪ್ರತಿಕ್ರಿಯೆಗೆ ಅವರು ಖುಷಿಯಾಗಿದ್ದಾರೆ.
ಸುದೀಪ್ ಟೀಸರ್ ನಲ್ಲಿರುವ ಆನಿಮೇಷನ್ ಆಧಾರಿತ ಇರುವೆಯ ಗ್ರಾಫಿಕ್ಸ್ ಸೃಷ್ಟಿ ಮಾಡಲು 3 ತಿಂಗಳ ಸಮಯ ತೆಗೆದುಕೊಂಡಿದ್ದು ನಿರ್ಮಾಪಕರಿಗೆ 8 ಲಕ್ಷ ರೂಪಾಯಿ ಖರ್ಚಾಗಿದೆ ಎನ್ನುತ್ತಾರೆ ಪ್ರೇಮ್. ಇದು ಕೇವಲ ಸ್ಯಾಂಪಲ್ ಅಷ್ಟೆ, ಇನ್ನೂ ಹೆಚ್ಚಿನ ಪ್ರೇಕ್ಷಕರಿಗೆ ಇಷ್ಟವಾಗುವ ದೃಶ್ಯಗಳು ಬರಲಿವೆ ಎಂದು ಭರವಸೆ ನೀಡುತ್ತಾರೆ.
ಟೀಸರ್ ನಲ್ಲಿ ಕುತೂಹಲ ಆಸಕ್ತಿ ಹುಟ್ಟಿಸಿದ ನಂತರ ಇದೀಗ ಚಿತ್ರದ ಆಡಿಯೊ ಬಿಡುಗಡೆ ಕಡೆ ಅವರ ಗಮನ ಹರಿದಿದೆ. ಇಬ್ಬರು ಸ್ಟಾರ್ ನಟರನ್ನು ಒಳಗೊಂಡ ಚಿತ್ರವಾಗಿರುವುದರಿಂದ ಅದ್ದೂರಿ ಆಡಿಯೊ ಬಿಡುಗಡೆ ಸಮಾರಂಭ ಆಯೋಜಿಸುವ ಯೋಜನೆಯಲ್ಲಿದ್ದಾರೆ. ಒಂದು ಕರ್ನಾಟಕದಲ್ಲಿ ಇನ್ನೊಂದು ವಿದೇಶದಲ್ಲಿ ಆಡಿಯೊ ಬಿಡುಗಡೆ ಮಾಡುವ ಯೋಜನೆ ನಿರ್ದೇಶಕರದ್ದು.
ಜುಲೈಯಲ್ಲಿ ಹುಬ್ಬಳ್ಳಿಯಲ್ಲಿ ಆಡಿಯೊ ಬಿಡುಗಡೆ ಮಾಡಿದರೆ ದುಬೈಯಲ್ಲಿ ಕೂಡ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದ್ದಾರೆ. ಅದು ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ತಮಿಳಿನ 2.0 ಚಿತ್ರದ ಆಡಿಯೊ ಬಿಡುಗಡೆಯಾದ ಸ್ಥಳದಲ್ಲಿ ಎಂದು ಪ್ರೇಮ್ ವಿವರಣೆ ನೀಡಿದರು.
ಬೇರೆ ಸ್ಥಳೀಯ ಭಾಷೆಯ ಚಿತ್ರಗಳು ಇಂದು ವಿದೇಶಗಳಲ್ಲಿ ಬಿಡುಗಡೆಯಾಗುತ್ತಿವೆ. ಹಾಗಿರುವಾಗ ಕನ್ನಡದಲ್ಲಿ ಕೂಡ ಏಕೆ ಈ ಪ್ರಯತ್ನ ಮಾಡಬಾರದು? ತಮಿಳು ನಿರ್ದೇಶಕ ಎಸ್ ಶಂಕರ್ ಅವರ 2.0 ಚಿತ್ರದ ಆಡಿಯೊ ದುಬೈಯಲ್ಲಿ ಬಿಡುಗಡೆಯಾದರೆ ನಾವು ಕೂಡ ಮಾಡಬಹುದಲ್ಲವೇ ಎಂದು ಆತ್ಮವಿಶ್ವಾಸದಿಂದ ಪ್ರೇಮ್ ಕೇಳುತ್ತಾರೆ.
ನಾವು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು ದಿನಾಂಕ ನಿಗದಿಯಾಗಬೇಕಷ್ಟೆ. ಇನ್ನೆರಡು ದಿನಗಳಲ್ಲಿ ಆಡಿಯೊ ಬಿಡುಗಡೆ ಬಗ್ಗೆ ದಿನಾಂಕ ಪ್ರಕಟಿಸುತ್ತೇವೆ ಎಂದರು.
ಈ ಮಧ್ಯೆ ಚಿತ್ರ ನಿರ್ಮಾಪಕರು ವರಮಹಾಲಕ್ಷ್ಮಿ ಹಬ್ಬದ ವೇಳೆಗೆ ಆಗಸ್ಟ್ ಕೊನೆಯ ಹೊತ್ತಿಗೆ ಚಿತ್ರ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದಾರೆ. ಸಿಆರ್ ಮನೋಹರ್ ನಿರ್ಮಾಣದ ದಿ ವಿಲನ್ ನಲ್ಲಿ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ, ತೆಲುಗು ನಟ ಶ್ರೀಕಾಂತ್ ಕೂಡ ಅಭಿನಯಿಸಿದ್ದಾರೆ.
ಇನ್ನು ಹಾಡಿನ ಚಿತ್ರೀಕರಣ ಮುಗಿಸಲು ನಾಯಕಿ ಆಮಿ ಜಾಕ್ಸನ್ ಜುಲೈ ಮಧ್ಯ ಭಾಗದಲ್ಲಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ನಾಲ್ಕು ದಿನ ಸಮಯ ಅವರು ನೀಡಿದ್ದು ಸುದೀಪ್ ಮತ್ತು ಆಮಿ ಜಾಕ್ಸನ್ ಭಾಗದ ಹಾಡೊಂದು ಶೂಟಿಂಗ್ ಬಾಕಿಯಿದೆ ಎಂದರು ಪ್ರೇಮ್.