ಮಗನಂತೆ ಮಧ್ಯರಾತ್ರಿಯಿಂದಲೂ ಸುಮಲತಾ ಅವರಿಗೆ ಬೆನ್ನೆಲುಬಾಗಿ ನಿಂತ ಯಶ್
ಶನಿವಾರ ರಾತ್ರಿ ನಿಧನರಾದ ಕನ್ನಡ ಚಿತ್ರರಂಗದ ಮೇರು ನಟ ಅಂಬರೀಶ್ ಅವರ ಅಗಲಿಕೆಗೆ ಇಡೀ ಚಿತ್ರರಂಗ ಕಂಬನಿ ಮಿಡಿದಿದ್ದು, ಸ್ವತಃ ಮುಖ್ಯಮಂತ್ರಿಗಳು ಅಂಬರೀಷ್ ಅವರ ಅಂತಿಮ ದರ್ಶನದ ವ್ಯವಸ್ಥೆಯಿಂದ ಹಿಡಿದು ಅಂತ್ಯ ಸಂಸ್ಕಾರಕ್ಕೆ ಅಗತ್ಯವಿರುವ ತಯಾರಿಗಳ ಬಗ್ಗೆ ಗಮನ ಹರಿಸುತ್ತಿದ್ದಾರೆ.
ಈ ನಡುವೆ ಅಂಬರೀಷ್ ಅವರ ಆಶೀರ್ವಾದ ಪಡೆದು ನಟನೆಗೆ ಎಂಟ್ರಿ ಕೊಟ್ಟಿದ್ದ ರಾಕಿಂಗ್ ಸ್ಟಾರ್ ಯಶ್, ಮಗನಂತೆ ಅಂಬರೀಷ್ ಅವರು ನಿಧನರಾದ ಮಧ್ಯರಾತ್ರಿಯಿಂದಲೂ ಸುಮಲತಾ ಅವರಿಗೆ ಬೆನ್ನೆಲುಬಾಗಿ ನಿಂತಿದ್ದರು, ಪಾರ್ಥಿವ ಶರೀರದ ಜೊತೆಗೇ ಇದ್ದ ಯಶ್ ಕಂಠೀರವ ಕ್ರೀಡಾಂಗದಲ್ಲಿ ಅಂತಿಮ ದರ್ಶನ ವ್ಯವಸ್ಥೆಯಲ್ಲಿ ಯಾವುದೇ ಲೋಪ ಉಂಟಾಗದಂತೆ ಎಚ್ಚರಿಕೆ ವಹಿಸಿದ್ದರು. ಇನ್ನು ಭಾನುವಾರ ಸಂಜೆ ಮಂಡ್ಯದ ವಿಶ್ವೇಶ್ವರಯ್ಯ ಸ್ಟೇಡಿಯಂ ನಲ್ಲಿ ಅಂತಿಮ ದರ್ಶನ ವ್ಯವಸ್ಥೆ ಮಾಡಿದಾಗಲೂ ಅಂಬರೀಷ್ ಅವರ ಕುಟುಂಬ ಸದಸ್ಯರೊಂದಿಗೆ ಇದ್ದ ಯಶ್, ತಮ್ಮ ನೆಚ್ಚಿನ ನಟನನ್ನು ಕೊನೆಯ ಬಾರಿ ಕಣ್ತುಂಬಿಕೊಳ್ಳುವುದಕ್ಕೆ ಹರಿದುಬರುತ್ತಿದ್ದ ಜನಸಾಗರವನ್ನು ನಿಯಂತ್ರಿಸಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಕೆಲವು ಅಭಿಮಾನಿಗಳು ಬ್ಯಾರಿಕೆಡ್ ಮುರಿದು ಒಳನುಗ್ಗಲು ಯತ್ನಿಸಿದ್ದ ವೇಳೆ ನಟ ಯಶ್ ಅವರನ್ನು ಸಂತೈಸಿ ಅಂಬರೀಷ್ ಅವರ ಅಂತಿಮ ದರ್ಶನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾವಹಿಸುತ್ತಾ, ಮಗನಂತೆ ಅಂಬರೀಷ್ ಕುಟುಂಬ ಸದಸ್ಯರಿಗೆ ನೆರವಾಗಿದ್ದಾರೆ.