ಬೆಂಗಳೂರು: ತಾರಾ ಜೋಡಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ಮುರಿದು ಬಿದ್ದಿರುವ ವದಂತಿಗಳ ಬಗ್ಗೆ ತೆಲುಗು ನಟ ವಿಜಯ್ ದೇವರಕೊಂಡ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಮುಂಬರುವ ಚಿತ್ರ 'ನೋಟಾ' ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸುದ್ದಿ ವಾಹಿನಿಗಳ ಪ್ರತಿನಿಧಿಗಳು ಅವರಲ್ಲಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಬ್ರೇಕಪ್ ಸುದ್ದಿ ಕುರಿತು ಪ್ರಶ್ನಿಸಿದರು.
ಇದಕ್ಕೆ ವಿಜಯ್, ಅದರ ಬಗ್ಗೆ ನಾನು ಏನು ಪ್ರತಿಕ್ರಿಯೆ ನೀಡಬೇಕು? ಇನ್ನೊಬ್ಬರ ಖಾಸಗಿ ವಿಷಯಗಳನ್ನು ಮನರಂಜನೆಯಾಗಿ ತೆಗೆದುಕೊಂಡು ಅಂತಹ ಸುದ್ದಿಗಳನ್ನು ವೈಭವೀಕರಿಸುವುದು ಅಷ್ಟು ಒಳ್ಳೆಯದಲ್ಲ ಎಂದು ನನಗನಿಸುತ್ತದೆ. ಇದರಿಂದ ಹಣ ಸಿಗಬಹುದು, ಆದರೆ ಅಂತಹ ಸುದ್ದಿಗಳನ್ನು ಒಂದು ಹಂತದವರೆಗೆ ನೀಡಿದರೆ ಮಾತ್ರ ಉತ್ತಮ. ರಶ್ಮಿಕಾ ಮಂದಣ್ಣ ಅವರ ಜೊತೆ ಅಭಿನಯಿಸಿರುವುದು ಖುಷಿ ತಂದಿದೆ. ಮುಂದಿನ ಚಿತ್ರದಲ್ಲಿಯೂ ಅವರ ಜೊತೆ ಅಭಿನಯಿಸುತ್ತಿದ್ದು ಅವರ ಬಗೆಗಿನ ಅಭಿಪ್ರಾಯ ಬದಲಾಗುವುದಿಲ್ಲ, ಹಾಗೆಯೇ ಇರುತ್ತದೆ ಎಂದರು.
ಒಬ್ಬರಿಗೆ ನೋವುಂಟು ಮಾಡುವ ವಿಚಾರಗಳಿಂದ ಮನರಂಜನೆ ಪಡೆಯುವುದು ಉತ್ತಮ ಎನಿಸುವುದಿಲ್ಲ. ಅವರ ಬಗ್ಗೆ ನನಗೆ ವೈಯಕ್ತಿಕವಾಗಿ ತಿಳಿದಿದ್ದು, ಇಂತಹ ಎಷ್ಟು ನೋವು ಅನುಭವಿಸಿದ್ದಾರೆ ಎಂದು ನನಗೆ ತಿಳಿದಿದೆ. ಈ ವಿಚಾರದಲ್ಲಿ ರಕ್ಷಿತ್ ಮತ್ತು ರಶ್ಮಿಕಾ ತಮಗೆ ತಮ್ಮಷ್ಟಕ್ಕೆ ಇರಲು ಅವಕಾಶ ನೀಡಿ ಎಂದು ಮನವಿ ಮಾಡಿಕೊಂಡಿದ್ದರು. ಅಂತಹ ಸಂದರ್ಭದಲ್ಲಿ ಅವರ ಕುರಿತಾಗಿ ತುಂಬಾ ಅಸೂಕ್ಷ್ಮವಾಗಿ ನಡೆದುಕೊಳ್ಳುವುದು ಸರಿಯಲ್ಲ ಎಂದು ನನ್ನ ಭಾವನೆ. ಅವರಿಗೆ ಸಮಯ ಮತ್ತು ಅವರ ವೈಯಕ್ತಿಕ ವಿಷಯಗಳನ್ನು ನಿಭಾಯಿಸಿಕೊಳ್ಳಲು ಅವಕಾಶ ನೀಡಬೇಕೆಂದಷ್ಟೇ ನಾನು ಹೇಳುತ್ತೇನೆ ಎಂದಿದ್ದಾರೆ.
ಇದೇ ವೇಳೆ ರಕ್ಷಿತ್ ಅವರ `ಅವನೇ ಶ್ರೀಮನ್ನಾರಾಯಣ’ ಸಿನಿಮಾ ಕುರಿತು ಮಾತನಾಡಿದ ವಿಜಯ್, ರಕ್ಷಿತ್ ವರ್ಕ್ ಅನ್ನು ನಾನು ಬಹಳ ಇಷ್ಟಪಡುತ್ತೇನೆ. ಅಲ್ಲದೇ ರಶ್ಮಿಕಾ ಹಾಗೂ ರಕ್ಷಿತ್ ಇಬ್ಬರಿಗೂ ನಾನು ತುಂಬಾ ಗೌರವ ನೀಡುತ್ತೇನೆ ಎಂದರು.
ಇದೇ ವೇಳೆ ಬೆಂಗಳೂರಿನೊಂದಿಗಿನ ತಮ್ಮ ನಂಟಿನ ಬಗ್ಗೆಯೂ ಮಾತನಾಡಿದರು. ಬೆಂಗಳೂರಿನ ಹಲವು ಸ್ಥಳಗಳಲ್ಲಿ ಸುತ್ತಿದ್ದೇನೆ, ಇಲ್ಲಿನ ಒರಾಯನ್ ಮಾಲ್, ಜಾಲಹಳ್ಳಿ ಮೊದಲಾದ ಸ್ಥಳಗಳಲ್ಲಿ ಸ್ನೇಹಿತರ ಜೊತೆ ತಿರುಗಾಡಿ ಟೀ ಕುಡಿದಿದ್ದೇನೆ, ನನಗೆ ಅವಕಾಶ ಸಿಕ್ಕಿದರೆ ಕನ್ನಡದಲ್ಲಿಯೂ ನಟಿಸುತ್ತೇನೆ. ಶಿವಣ್ಣ, ಚಿರಂಜೀವಿ ಸರ್ ನನ್ನ ನಟನೆ ಬಗ್ಗೆ ಮೆಚ್ಚುಗೆ ಸೂಚಿಸಿರುವುದು ಖುಷಿ ನೀಡಿದೆ ಎಂದರು.
ವಿಜಯ್ ನಟಿಸಿರುವ ನೋಟಾ ಚಿತ್ರ ನಾಳೆ ತೆರೆ ಕಾಣಲಿದೆ. ಆನಂದ್ ಶಂಕರ್ ನಿರ್ದೇಶನದ ಪೊಲಿಟಿಕಲ್ ಥ್ರಿಲ್ಲರ್ ಚಿತ್ರ ಇದಾಗಿದೆ.