ಸಿನಿಮಾಗಳ ಪ್ರಚಾರಕ್ಕೆ ಫ್ಲೆಕ್ಸ್ ಬಳಸಲು ಅನುಮತಿ ಕೊಡಿ: ಸಿಎಂ ಕುಮಾರಸ್ವಾಮಿಗೆ ಚಿತ್ರರಂಗ ಮನವಿ
ಬೆಂಗಳೂರು: ರಾಜಧಾನಿಯಲ್ಲಿ ಫ್ಲೆಕ್ಸ್ ನಿಷೇಧ ಹಿನ್ನಲೆಯಲ್ಲಿ ಚಲನಚಿತ್ರಗಳ ಪ್ರಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಮುಖ್ಯಮಂತ್ರಿಗಳಿಗೆ ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ನಿಯೋಗವು ಗುರುವಾರ ಮನವಿ ಮಾಡಿಕೊಂಡಿತು.
ನಗರದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿಯಾದ ವಾಣಿಜ್ಯ ಮಂಡಳಿ ನಿಯೋಗವು, ನಗರದಲ್ಲಿ ಫ್ಲೆಕ್ಸ್ ಬಳಕೆ ನಿಷೇಧ ಬಳಿಕ ಚಲನಚಿತ್ರ ಪ್ರಚಾರಕ್ಕೆ ಉಂಟಾಗಿರುವ ಸಮಸ್ಯೆ ಕುರಿತು ವಿವರಿಸಿತು. ಈ ಮನವಿಗೆ ಸ್ಪಂದನೆ ನೀಡಿದ ಮುಖ್ಯಮಂತ್ರಿಗಳು, ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆಂದು ತಿಳಿದುಬಂದಿದೆ.
ಕನ್ನಡ ಚಲನಚಿತ್ರಗಳ ಪ್ರಚಾರಕ್ಕೆ ಪೋಸ್ಟರ್ ಗಳು ಹಾಗೂ ಬ್ಯಾನರ್ ಗಳು ಅತ್ಯಗತ್ಯವಾಗಿವೆ. ಆದರೆ, ಅವುಗಳನ್ನು ಹಾಕದಂತೆ ನ್ಯಾಯಾಲಯವು ಅದೇಶ ನೀಡಿದೆ. ಹೀಗಾಗಿ ಚಿತ್ರಮಂದಿರದ ಮುಂದೆ ಹಾಗೂ ಕೆಲವು ನಿಗದಿತ ಸ್ಥಳಗಳಲ್ಲಿ ಚಲಚಿತ್ರಗಳ ಪೋಸ್ಟರ್ ಹಾಗೂ ಬ್ಯಾನರ್ ಅಳವಡಿಕೆಗೆ ಅವಕಾಶ ಕಲ್ಪಿಸುವಂತೆ ಮುಖ್ಯಮಂತ್ರಿಗಳಿಗೆ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡರು ಮನವಿ ಮಾಡಿಕೊಂಡರು.
ಸ್ವತಃ ನಿರ್ಮಾಪಕರಾಗಿರುವ ತಮಗೆ ನಿರ್ಮಾಪಕರ ಕಷ್ಟಗಳ ಬಗ್ಗೆ ಅರಿವಿದೆ. ಆದ್ದರಿಂದ ನ್ಯಾಯಾಲಯದ ಆದೇಶಕ್ಕೆ ಯಾವುದೇ ರೀತಿಯ ಧಕ್ಕೆ ಉಂಟಾಗದಂತೆ ಚಲಚಿತ್ರಗಳ ಪ್ರಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕೆಂದು ಕೋರಿದ್ದಾರೆ.
ವಿಲನ್ ಚಿತ್ರ ಪ್ರಚಾರಕ್ಕೆ ಪ್ರತ್ಯೇಕ ಸ್ಥಳ ನೀಡುವಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡಿದ್ದೇವೆ. ನಗರದ ಸೌಂದರ್ಯಕ್ಕೆ ಧಕ್ಕೆಯುಂಟು ಮಾಡುವುದಿಲ್ಲ ಎಂದು ತಿಳಿಸಿದ್ದೇವೆ. ಆದರೆ, ಈ ಕುರಿತ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವುದರಿಂದ ಪ್ರಸ್ತುತ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ನನಗಿಲ್ಲ ಎಂದಿರುವ ಮುಖ್ಯಮಂತ್ರಿಗಳು, ಬಿಬಿಎಂಪಿ ಆಯುಕ್ತರೊಂದಿಗೆ ಮಾತುಕತೆ ನಡೆಸಿ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆಂದು ಚಿನ್ನೇಗೌಡ ಅವರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos