ಸಿನಿಮಾ ಸುದ್ದಿ

ಅರ್ಜುನ್ ಸರ್ಜಾ ಮೇಲೆ ಶ್ರುತಿ ಹರಿಹರನ್ ಆರೋಪ; ಅರುಣ್ ವೈದ್ಯನಾಥನ್ ಹೇಳಿದ್ದೇನು?

Sumana Upadhyaya

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಭ್ಯ ನಟ ಎಂದು ಕರೆಯಲ್ಪಡುತ್ತಿದ್ದ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಕನ್ನಡ ನಟಿ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳ ಆರೋಪ ಮಾಡಿರುವುದು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ.

2017ರ ಜುಲೈಯಲ್ಲಿ ಬಿಡುಗಡೆಯಾದ ''ವಿಸ್ಮಯ' ಚಿತ್ರದ ರಿಹರ್ಸಲ್ ವೇಳೆ ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತಿಸಿದರು'' ಎಂದು ನಟಿ ಶ್ರುತಿ ಹರಿಹರನ್ ಆರೋಪಿಸಿದ್ದಾರೆ. ''ನಾನು ಈ ರೀತಿ ಮಾಡಿಲ್ಲ. ಅವರನ್ನು ಸುಮ್ಮನೆ ತಬ್ಬಿಕೊಳ್ಳುವ ಅಗತ್ಯ ನನಗೆ ಇಲ್ಲ. ಆ ಚಿತ್ರದಲ್ಲಿ ಗಂಡ-ಹೆಂಡತಿಯ ರೊಮ್ಯಾಂಟಿಕ್ ದೃಶ್ಯಗಳು ಹೆಚ್ಚಿತ್ತು. ನಾನೇ ನಿರ್ದೇಶಕರಿಗೆ ಹೇಳಿ ಕಟ್ ಮಾಡಿಸಿದೆ. ಯಾಕಂದ್ರೆ, ನನಗೆ ಅದು ಮುಜುಗರ ಆಗುತ್ತಿತ್ತು'' ಎಂದು ನಟ ಅರ್ಜುನ್ ಸರ್ಜಾ ಪ್ರತಿಕ್ರಿಯೆ ನೀಡಿದ್ದರು.

ಇದೀಗ ವಿವಾದದ ಬಗ್ಗೆ ಚಿತ್ರದ ನಿರ್ದೇಶಕ ಅರುಣ್ ವೈದ್ಯನಾಥನ್ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. 'ವಿಸ್ಮಯ' ಚಿತ್ರೀಕರಣದ ವೇಳೆ ಏನಾಯ್ತು ಎಂದು ನಿರ್ದೇಶಕ ಅರುಣ್ ವೈದ್ಯನಾಥನ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.  'ಅರ್ಜುನ್ ಸರ್ ಮತ್ತು ಶ್ರುತಿ ಹರಿಹರನ್, ಇಬ್ಬರೂ ನನಗೆ ಆತ್ಮೀಯ ಸ್ನೇಹಿತರು ಮತ್ತು ಅವರ ಕುಟುಂಬಗಳ ಪರಿಚಯವೂ ನನಗಿದೆ. ಸೆಟ್ ನಲ್ಲಿ ಅರ್ಜುನ್ ಸರ್ ಪರ್ಫೆಕ್ಟ್ ಜೆಂಟಲ್ ಮ್ಯಾನ್. ನಟನೆಯ ವಿಷಯದಲ್ಲಿ ಅರ್ಜುನ್ ಸರ್ ಪಕ್ಕಾ ಪ್ರೊಫೆಶನಲ್. ನಟಿ ಶ್ರುತಿ ಹರಿಹರನ್ ಕೂಡ ವೃತ್ತಿಪರ ನಟಿ ಎಂದಿದ್ದಾರೆ.

ಮೀಟೂ ಅಭಿಯಾನದಲ್ಲಿ ನಟಿ ಶ್ರುತಿ ಹರಿಹರನ್, ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದ್ದಾರೆ. ಇದು ನನಗೆ ಆಘಾತ ತಂದಿದೆ. ನಟಿ ಶ್ರುತಿ ಹರಿಹರನ್ ಯಾವ ಸೀನ್ ಬಗ್ಗೆ ಮಾತನಾಡುತ್ತಿದ್ದಾರೋ, ಅದು ರೊಮ್ಯಾಂಟಿಕ್ ಸೀನ್. ಶಾಟ್ ಗೆ ಮುನ್ನ ರಿಹರ್ಸಲ್ ಮಾಡಿ ಐಡಿಯಾಗಳನ್ನ ಚರ್ಚೆ ಮಾಡುತ್ತಿದ್ದುದು ನಿಜ. ನಟನೆಯಲ್ಲಿ ಕೆಲವು ಸುಧಾರಣೆಗಳನ್ನು ಮಾಡಿ ನಾನು ಎಡಿಟ್ ಮಾಡಿದೆ. ಕೊನೆಗೆ ಸೀನ್ ನ ಶೂಟಿಂಗ್ ಮಾಡಿದ್ವಿ. ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಸುಧಾರಣೆಗಳು ಮಾಡುವುದು ಸಾಮಾನ್ಯ.

''ಶೂಟಿಂಗ್ ನಡೆದಿದ್ದು ಎರಡು ವರ್ಷಗಳ ಹಿಂದೆ. ಘಟನೆಯ ಕ್ಷಣ ಕ್ಷಣದ ಮಾಹಿತಿ ನನಗೆ ನೆನಪಿಲ್ಲ. ಆದ್ರೆ, ಒಂದನ್ನ ಮಾತ್ರ ನಾನು ಖಚಿತ ಪಡಿಸುವೆ. ಅದೇನೆಂದರೆ, ಆ ಸೀನ್ ತೆರೆಮೇಲೆ ಬಂದಿರುವುದಕ್ಕಿಂತ ಹೆಚ್ಚು ರೊಮ್ಯಾಂಟಿಕ್ ಆಗಿತ್ತು. ಆದ್ರೆ, ಸ್ಕ್ರಿಪ್ಟಿಂಗ್ ಸ್ಟೇಜ್ ನಲ್ಲಿಯೇ ಅಂತಹ ದೃಶ್ಯಗಳನ್ನ ಕಮ್ಮಿ ಮಾಡುವಂತೆ ಅರ್ಜುನ್ ಸರ್ಜಾ ಮನವಿ ಮಾಡಿದ್ದರು.

ವಯಸ್ಸಿಗೆ ಬಂದಿರುವ ಹೆಣ್ಮಕ್ಕಳು ನನಗೆ ಇದ್ದಾರೆ. ಇಂತಹ ದೃಶ್ಯಗಳಲ್ಲಿ ನಾನು ಅಭಿನಯಿಸಲ್ಲ ಅಂತ ಅರ್ಜುನ್ ಸರ್ಜಾ ಹೇಳಿದ್ದರು. ನಾನು ಅವರ ಮಾತಿಗೆ ಬೆಲೆ ಕೊಟ್ಟು ಸೀನ್ ನ ಬೇರೆ ತರಹ ಬರೆದಿದ್ದೆ. ಇದು ಸತ್ಯ, ಸೆಟ್ ಹೊರಗೆ ಇಬ್ಬರ ನಡುವೆ ಏನಾಯ್ತು, ದೂರವಾಣಿ ಕರೆ ಹಾಗೂ ಚಾಟ್ ಗಳಲ್ಲಿ ಏನೇನು ನಡೆಯಿತು ಎಂಬುದು ನನಗೆ ಗೊತ್ತಿಲ್ಲ. ಯಾಕಂದ್ರೆ, ಈ ಬಗ್ಗೆ ದೂರು ಬಂದಿಲ್ಲ. ಹೀಗಾಗಿ, ಇದರ ಬಗ್ಗೆ ನಾನು ಕಾಮೆಂಟ್ ಮಾಡುವುದಿಲ್ಲ ಎಂದು ಅರುಣ್ ವೈದ್ಯನಾಥನ್ ಹೇಳಿದ್ದಾರೆ.

SCROLL FOR NEXT