ಸಿನಿಮಾ ಸುದ್ದಿ

ಡಿಕೆ ರವಿ ಜೀವನಾಧಾರಿತ: ಚಂಬಲ್ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್‌ಗೆ ಅರ್ಜಿ

Vishwanath S
ಬೆಂಗಳೂರು: ನಟ ನೀನಾಸಂ ಸತೀಶ್ ಅಭಿನಯದ 'ಚಂಬಲ್' ಬಿಡುಗಡೆಗೆ ತಡೆ ಕೋರಿ ಐಎಎಸ್ ಅಧಿಕಾರಿ ದಿವಂಗತ ಡಿಕೆ. ರವಿ ಅವರ ತಾಯಿ ಗೌರಮ್ಮ ಹಾಗೂ ತಂದೆ ಕರಿಯಪ್ಪ ಹೈಕೋರ್ಟ್ ಗೆ  ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಚಿತ್ರದಲ್ಲಿ ಡಿಕೆ ರವಿ ಅವರ ಚಾರಿತ್ರ್ಯ ಹರಣ ಮಾಡುವಂತಹ ಅಂಶಗಳನ್ನು ಸೇರಿಸಲಾಗಿದೆ. ಚಿತ್ರದ ಟ್ರೇಲರ್ ಹಾಗೂ ಶೀರ್ಷಿಕ ಅವಹೇಳನಕಾರಿಯಾಗಿದೆ. ಆದ್ದರಿಂದ ಚಿತ್ರದ ಸೆನ್ಸಾರ್ ಪ್ರಮಾಣಪತ್ರ ಹಿಂಪಡೆಯುವಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. 
ಡಿಕೆ ರವಿ ಅವರು ಓರ್ವ ಪ್ರಾಮಾಣಿಕ ಅಧಿಕಾರಿಯಾಗಿದ್ದರು. ಅವರ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇರಲಿಲ್ಲ. ಆದರೆ, ಚಿತ್ರದಲ್ಲಿ ಅವರನ್ನು ಕೆಟ್ಟ ವ್ಯಕ್ತಿಯನ್ನಾಗಿ ಬಿಂಬಿಸಲಾಗುತ್ತಿದೆ. ಆದ್ದರಿಂದ ಚಿತ್ರದ ಬಿಡುಗಡೆಗೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.  ಈಗಾಗಲೇ ಚಿತ್ರದ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ಗೌರಮ್ಮ ಅವರು ದೂರು ಸಲ್ಲಿಸಿದ್ದಾರೆ. 
ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ, ಕೇಂದ್ರ ಸಾರ್ವಜನಿಕ ಮತ್ತು ಮಾಹಿತಿ ಸಚಿವಾಲಯದ ಕಾರ್ಯದರ್ಶಿ, ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ, ರಾಜ್ಯ ಸೆನ್ಸಾರ್ ಮಂಡಳಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಚಿತ್ರತಂಡಕ್ಕೆ ನೋಟಿಸ್ ಜಾರಿಮಾಡಿದೆ. ವಿಚಾರಣೆಯನ್ನು ಫೆ.21ಕ್ಕೆ ಮುಂದೂಡಲಾಗಿದೆ.
SCROLL FOR NEXT