ಬೆಂಗಳೂರು: ಮದಕರಿ ನಾಯಕನ ಕುರಿತ ಐತಿಹಾಸಿ ಚಿತ್ರವನ್ನು ನಟರಾದ ದರ್ಶನ್ ಮತ್ತು ಸುದೀಪ್ ಅವರು ಪ್ರತ್ಯೇಕವಾಗಿ ಮಾಡುತ್ತಿದ್ದಾರೆ ಎಂಬ ಸುದ್ದಿ ಬಹಳ ದಿನಗಳ ಹಿಂದೆ ಕೇಳಿ ಬಂದಿತ್ತು. ಇದೀಗ ಹೊಸ ಸುದ್ದಿ ಎಂದರೆ ಸುದೀಪ್ ತಮ್ಮ ಕನಸಿನ ಚಿತ್ರವನ್ನು ಬಿಟ್ಟುಕೊಟ್ಟಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಕೆಲ ಮಾಧ್ಯಮಗಳು ವರದಿ ಮಾಡಿದ್ದು, ನಟ ಕಿಚ್ಚಾ ಸುದೀಪ್ ಅವರು, ತಾವು ನಿರ್ದೇಶಿಸಿ, ನಟಿಸಬೇಕಿದ್ದ ಮದಕರಿ ನಾಯಕನ ಜೀವನ ಚರಿತ್ರೆ ಆಧರಿಸಿದ ‘ದುರ್ಗದ ಹುಲಿ’ ಚಿತ್ರವನ್ನು ಕೈಬಿಟ್ಟಿದ್ದಾರೆ ಎಂದು ವರದಿ ಮಾಡಿವೆ.
ಈ ಹಿಂದೆ ದರ್ಶನ್ ಅಭಿನಯದಲ್ಲಿ, ರಾಕ್‌ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ‘ಗಂಡುಗಲಿ ವೀರ ಮದಕರಿ’ ಸಿನಿಮಾ ಸೆಟ್ಟೇರಲು ತಯಾರಾಗಿತ್ತು. ಇತ್ತ ಸುದೀಪ್ ತನ್ನ ಮಹತ್ವಾಕಾಂಕ್ಷೆಯ ‘ದುರ್ಗದ ಹುಲಿ’ ಚಿತ್ರ ನಿರ್ದೇಶಿಸಲು ತಯಾರಿ ಮಾಡಿಕೊಂಡಿದ್ದರು. ಈ ಬಗ್ಗೆ ಸುದೀಪ್ ಈ ಹಿಂದೆ ಸ್ಪಷ್ಟನೆ ಕೂಡ ನೀಡಿ ತಾವೂ ಕೂಡ ಮದಕರಿ ಕುರಿತ ಚಿತ್ರ ಮಾಡುತ್ತಿದ್ದೇವೆ ಎಂದು ಹೇಳಿದ್ದರು. ಹೀಗಾಗಿ ಈ ಎರಡೂ ಚಿತ್ರಗಳು ಇಬ್ಬರು ನಟರುಗಳ ಅಭಿಮಾನಿಗಳ ನಡುವೆ ಸಾಕಷ್ಟುಜಿದ್ದಾಜಿದ್ದಿಗೆ ಕಾರಣವಾಗಿತ್ತು. ಆದರೆ, ಇದೀಗ ‘ದುರ್ಗದ ಹುಲಿ’ ಚಿತ್ರದ ಅಂಗಳದಿಂದ ಹಿಂದೆ ಸರಿಯುತ್ತಿರುವುದಾಗಿ ಸ್ವತಃ ಸುದೀಪ್ ಅವರೇ ಹೇಳಿಕೊಂಡಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
ಮಾಧ್ಯಮ ವರದಿಯನ್ವಯ, ಇತ್ತೀಚೆಗಷ್ಟೆನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಸುದೀಪ್ ಅವರನ್ನು ಭೇಟಿ ಮಾಡಿ ಚಿತ್ರದುರ್ಗದ ಪಾಳೆಗಾರರ ಕತೆಯ ಎರಡು ಸಿನಿಮಾ ಆಗುತ್ತಿರುವ ಬಗ್ಗೆ ಮಾತುಕತೆ ಮಾಡುತ್ತಿದ್ದಾಗ ‘ನೀವು ನಮ್ಮ ಕನ್ನಡ ಚಿತ್ರರಂಗದ ನಿರ್ಮಾಪಕರು. ದರ್ಶನ್ ಕೂಡ ನಮ್ಮ ಕನ್ನಡ ಚಿತ್ರರಂಗದ ಹೀರೋ. ಇಬ್ಬರೂ ನಮ್ಮವರೇ. ನಾನೂ ನಿಮ್ಮವನೇ. ಆದರೆ, ಒಂದೇ ಹಿನ್ನೆಲೆಯ ಕತೆಗಾಗಿ ನಾವು ಮುನಿಸಿಕೊಳ್ಳುವುದು ಬೇಡ. ದರ್ಶನ್ ಬೇರೆ ಅಲ್ಲ, ನೀವು ಬೇರೆ ಅಲ್ಲ. ನಾವೆಲ್ಲ ಗೆಳೆಯರು. ಹೀಗಾಗಿ ನಾನೇ ದುರ್ಗದ ಹುಲಿ ಚಿತ್ರದಿಂದ ಹಿಂದೆ ಸರಿಯುತ್ತಿದ್ದೇನೆ. ಮುಂದೆ ಬೇರೆ ಐತಿಹಾಸಿಕ ಸಿನಿಮಾ ಕತೆ ಸಿಕ್ಕರೆ ಜತೆಯಾಗಿ ಮಾಡೋಣ. ನೀವು ಖುಷಿಯಾಗಿ ವೀರ ಮದಕರಿ ನಾಯಕನ ಚಿತ್ರ ಮಾಡಿ’ ಎಂದು ಸುದೀಪ್ ರಾಕ್‌ಲೈನ್ ವೆಂಕಟೇಶ್ ಅವರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಆದರೆ ದರ್ಶನ್ ಆಗಲಿ, ಸುದೀಪ್ ಆಗಲಿ ಅಥವಾ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರಿಂದಾಗಲಿ ಈ ಬಗ್ಗೆ ಸ್ಪಷ್ಟನೆ ಬಂದಿಲ್ಲ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos