ಸಿನಿಮಾ ಸುದ್ದಿ

ಗ್ರಾಫಿಕ್ಸ್ ನಿಂದಾಗಿ 'ಅವನೇ ಶ್ರೀಮನ್ನಾರಾಯಣ' ಬಿಡುಗಡೆ ವಿಳಂಬ!

Sumana Upadhyaya

ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ಚಿತ್ರ ಅವನೇ ಶ್ರೀಮನ್ನಾರಾಯಣದ ಬಿಡುಗಡೆ ದಿನಾಂಕ ಕಂಪ್ಯೂಟರ್ ಗ್ರಾಫಿಕ್ಸ್ ಕೆಲಸದಿಂದಾಗಿ ಮುಂದೆ ಹೋಗಿದೆ. ಸಿಜಿ ಕೆಲಸ ಮುಗಿದ ನಂತರ ಚಿತ್ರದ ಬಿಡುಗಡೆ ದಿನಾಂಕ ನಿರ್ಧಾರವಾಗಲಿದೆ ಎನ್ನುತ್ತಾರೆ ಚಿತ್ರದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.


ಚಿತ್ರದ ಪ್ರತಿ ದೃಶ್ಯದಲ್ಲಿ ಕೂಡ ಕಂಪ್ಯೂಟರ್ ಗ್ರಾಫಿಕ್ಸ್ ಕೆಲಸವಿರುವುದರಿಂದ ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಸಮಯ ನಿರ್ಮಾಣಕ್ಕೆ ತೆಗೆದುಕೊಳ್ಳುತ್ತಿದೆ, ಈ ತಿಂಗಳ ಅಂತ್ಯದ ವೇಳೆಗೆ ಕೆಲಸ ಮುಗಿಯುವ ನಿರೀಕ್ಷೆಯಿದೆ. ಸದ್ಯ ನಾವು ನವೆಂಬರ್ 1ರಿಂದ 15ರೊಳಗೆ ಚಿತ್ರ ಬಿಡುಗಡೆ ಮಾಡಬೇಕೆಂದು ಗುರಿಯಿಟ್ಟುಕೊಂಡಿದ್ದೇವೆ ಎನ್ನುತ್ತಾರೆ ಪುಷ್ಕರ್.


ಇನ್ನು ನಟನೆಗೆ ಕೂಡ ಇಳಿಯುತ್ತಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ ತಮ್ಮ ಮುಂದಿನ ಚಿತ್ರವನ್ನು ಬರುವ ವರ್ಷಕ್ಕೆ ಮುಂದೂಡಿದ್ದಾರೆ. ಸದ್ಯಕ್ಕೆ ಅವರು ಅವನೇ ಶ್ರೀಮನ್ನಾರಾಯಣ ಮೇಲೆ ಸಂಪೂರ್ಣ ಗಮನಹರಿಸಿದ್ದಾರೆ. ಐದು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರ ತೆರೆಗೆ ಬರಲಿರುವುದರಿಂದ ಬಹಳಷ್ಟು ಕೆಲಸವಿದೆ, ದಿನಕ್ಕೆ 18 ಗಂಟೆ ಮಾಡಿದರೂ ಸಾಕಾಗುವುದಿಲ್ಲ ಎನ್ನುತ್ತಾರೆ. 


ತೆಲುಗು ಮತ್ತು ತಮಿಳು ಭಾಷೆಗಳ ಡಬ್ಬಿಂಗ್ ಕೆಲಸ ಮುಗಿದಿದೆ. ಮಲಯಾಳಂ ಡಬ್ಬಿಂಗ್ ಕಾರ್ಯ ಪ್ರಗತಿಯಲ್ಲಿದೆ. ಮುಂದೆ ಹಿಂದಿ ಡಬ್ಬಿಂಗ್ ನಡೆಯಲಿದ್ದು ಇನ್ನು 15 ದಿನಗಳಲ್ಲಿ ಮುಗಿಯಲಿದೆ.


ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಮೊದಲ ನಿರ್ಮಾಣದ ಚಿತ್ರ ಗೋದಿ ಬಣ್ಣ ಸಾಧಾರಣ ಮೈಕಟ್ಟು. ಇದೀಗ ಅವರ ಕೈಯಲ್ಲಿ ಐದು ಚಿತ್ರಗಳು ನಿರ್ಮಾಣದ ಹಂತದಲ್ಲಿವೆ. ಅವು ಅವನೇ ಶ್ರೀಮನ್ನಾರಾಯಣ, ಭೀಮ ಸೇನಾ ನಳ ಮಹರಾಜ, 777 ಚಾರ್ಲಿ, ಅವತಾರ ಪುರುಷ ಮತ್ತು ವಿನಯ್ ರಾಜ್ ಕುಮಾರ್ ಜೊತೆಗಿನ ಚಿತ್ರ. ಇನ್ನು ಮಲಯಾಳಂನಲ್ಲಿ ಸೆನ್ನಾ ಹೆಗ್ಡೆ ಜೊತೆ ಕೂಡ ಒಂದು ಸಿನಿಮಾ ಮಾಡಲಿದ್ದಾರೆ.


ಅವನೇ ಶ್ರೀಮನ್ನಾರಾಯಣಕ್ಕೆ ಶ್ರೀದೇವಿ ಎಂಟರ್ ಪ್ರೈಸಸ್ ನ ಹೆಚ್ ಕೆ ಪ್ರಕಾಶ್ ಕೂಡ ಬಂಡವಾಳ ಹಾಕಿದ್ದಾರೆ. ಶಾನ್ವಿ ಶ್ರೀವಾಸ್ತವ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಬಾಲಾಜಿ ಮನೋಹರ್ ಚಿತ್ರದಲ್ಲಿ ನಟಿಸಿದ್ದಾರೆ. ಸಚಿನ್ ರವಿ ನಿರ್ದೇಶನದಲ್ಲಿ ಚರಣ್ ರಾಜ್ ಮತ್ತು ಅಜನೀಶ್ ಬಿ ಲೋಕನಾಥ್ ಅವರ ಸಂಗೀತ ಮತ್ತು ಕರ್ಮ ಚಾವ್ಲಾ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

SCROLL FOR NEXT