ಸಿನಿಮಾ ಸುದ್ದಿ

ರಾಮಾಯಣ ಮುಕ್ತಾಯ ಬೆನ್ನಲ್ಲೇ, ಡಿಡಿ ವೀಕ್ಷಕರ ಸಂಖ್ಯೆಯಲ್ಲಿ ಗಣನೀಯ ಕುಸಿತ!

Srinivasamurthy VN

ನವದೆಹಲಿ: ದೂರದರ್ಶನ ವಾಹಿನಿಯಲ್ಲಿ ಮರುಪ್ರಸಾರವಾಗಿ ದಾಖಲೆ ಬರೆದಿದ್ದ ರಾಮಾಯಣ ಧಾರಾವಾಹಿ ಮುಕ್ತಾಯದ ಬೆನ್ನಲ್ಲೇ ಡಿಡಿ ವೀಕ್ಷಕರ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದೆ ಎಂದು ತಿಳಿದುಬಂದಿದೆ.

ಏಪ್ರಿಲ್ 18ರಂದು ರಾಮಾಯಣ ಧಾರಾವಾಹಿಯ ಕೊನೆಯ ಕಂತು ಪ್ರಸಾರವಾಗಿದ್ದು, ಅಲ್ಲಿಂದ ಇಲ್ಲಿಯವರೆಗೂ ದೂರದರ್ಶನದ ವೀಕ್ಷಕರ ಸಂಖ್ಯೆಯಲ್ಲಿ ಶೇ.50ರಷ್ಟು ವೀಕ್ಷಕರ ಪ್ರಮಾಣ ಕುಸಿತವಾಗಿದೆ. ಈ ಬಗ್ಗೆ ಬಾರ್ಕ್ (Broadcast Audience Research Council) ಮಾಹಿತಿ  ನೀಡಿದ್ದು, ಲಾಕ್ ಡೌನ್ ನ ಐದನೇ ವಾರದಲ್ಲಿ ದೂರದರ್ಶನದ ಏಪ್ರಿಲ್ 18ರಿಂದ 24ರವರೆಗಿನ ಬೆಳಗಿನ ಸ್ಲಾಟ್ ನ ವೀಕ್ಷಕರ ಸಂಖ್ಯೆಯಲ್ಲಿ ಶೇ. 66ರಷ್ಟು ಕುಸಿತ ಕಂಡುಬಂದಿದೆ. ಅಂತೆಯೇ ಸಂಜೆ ಸ್ಲಾಟ್ ನ ವೀಕ್ಷಕರ ಸಂಖ್ಯೆಯಲ್ಲಿ ಶೇ.29ರಷ್ಟು ಕುಸಿತ ಕಂಡುಬಂದಿದೆ. ಕಳೆದ ಒಂದು  ವಾರದಲ್ಲಿ ಡಿಡಿ ವೀಕ್ಷಕರ ಸಂಖ್ಯೆಯಲ್ಲಿ ಶೇ.46ರಷ್ಟು ಕುಸಿತವಾಗಿದೆ ಎಂದು ಹೇಳಿದೆ. 

ರಾಮಾಯಣದ ಬಳಿಕ ವಿಷ್ಣು ಪುರಾಣ
ಇನ್ನು ರಾಮಾಯಣ ಮುಕ್ತಾಯದ ಬೆನ್ನಲ್ಲೇ ಡಿಡಿ ಮತ್ತೆ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ತನ್ನ ಮತ್ತೊಂದು ಹಿಟ್ ಧಾರಾವಾಹಿ ವಿಷ್ಣು ಪುರಾಣವನ್ನು ಮರು ಪ್ರಸಾರ ಮಾಡಲು ಚಿಂತನೆಯಲ್ಲಿ ತೊಡಗಿದೆ. ಮತ್ತೆ ಕೆಲವರು ರಾಮಾಯಣದ ಸೀಕ್ವೆಲ್ ಉತ್ತರ ರಾಮಾಯಣ ಪ್ರಸಾರದ  ಕುರಿತೂ ಚಿಂಚನೆ ನಡೆಸಲಾಗುತ್ತಿದೆ.

ರಾಮಾಯಣದ ವಿಶ್ವ ದಾಖಲೆ; ಅತೀ ಹೆಚ್ಚು ವೀಕ್ಷಿಸಲ್ಪಟ್ಟ ಮನೋರಂಜನಾ ಕಾರ್ಯಕ್ರಮ
ಇನ್ನು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ರಮಾನಂದ ಸಾಗರ್ ವಿರಚಿತ ಧಾರಾವಾಹಿ ರಾಮಾಯಣ ಭಾರತದಲ್ಲಿ ಅತೀ ಹೆಚ್ಚು ಟಿಆರ್­ಪಿ ಪಡೆದ ಬೆನ್ನಲ್ಲೇ ಇದೀಗ ಮತ್ತೊಂದು ಸಾಧನೆ ಮಾಡಿದೆ. ವಿಶ್ವ ಮಟ್ಟದಲ್ಲಿಯೂ ಅತೀ ಹೆಚ್ಚು ವೀಕ್ಷಕರನ್ನು ಹೊಂದಿದೆ ಎಂದು ಪ್ರಸಾರ ಭಾರತಿ  ವರದಿ ಮಾಡಿದೆ. ಆ ಮೂಲಕ ಕೆಲ ದಶಕಗಳ ಹಿಂದಿನ ಧಾರಾವಾಹಿ ಮತ್ತೆ ಮರುಪ್ರಸಾರ ಕಂಡು ವಿಶ್ವದೆಲ್ಲೆಡೆ ಪ್ರಚಾರ ಪಡೆದಿದೆ. ಜಾಗತಿಕವಾಗಿ ಅತಿ ಹೆಚ್ಚು ಜನರು ವೀಕ್ಷಿಸುತ್ತಿರುವ ಮನರಂಜನಾ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ರಾಮಾಯಣ ಪಾತ್ರವಾಗಿದೆ.

ಏಪ್ರಿಲ್ 16 ರಂದು ರಾತ್ರಿ 9  ಗಂಟೆಗೆ ಪ್ರಸಾರಗೊಂಡ ರಾಮಾಯಣವನ್ನು ವಿಶ್ವದಾದ್ಯಂತ ಸುಮಾರು 7.7 ಕೋಟಿ ಜನರು ವೀಕ್ಷಿಸಿದ್ದಾರೆ. ಆ ಮೂಲಕ ಬಹು ಸಂಖ್ಯೆಯಲ್ಲಿ ಹೆಚ್ಚಿನ ವೀಕ್ಷಕರನ್ನು ತನ್ನೊಳಗೆ ಹಿಡಿದಿಟ್ಟುಕೊಂಡಿರುವುದಾಗಿ ಡಿಡಿ ತಿಳಿಸಿದೆ. ಭಾರತೀಯ ಟಿವಿ ಮಾಧ್ಯಮಗಳಲ್ಲಿಯೇ ಅತೀ ಹೆಚ್ಚಿನ ಜನರಿಂದ  ವೀಕ್ಷಣೆಗೊಳಪಟ್ಟ ಚಾನೆಲ್ ಆಗಿಯೂ ದೂರದರ್ಶನ ಪಾತ್ರವಾಗಿದೆ. ರಾಮಾಯಣ ಮರು ಪ್ರಸಾರ ಆರಂಭಿಸಿದ ಬಳಿಕ ಹಿಂದಿ ಮಾಧ್ಯಮಗಳ ಪೈಕಿ ಡಿಡಿ ಅತೀ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟಿದೆ ಎಂದೂ ವರದಿಗಳು ಹೇಳಿವೆ. 

ಧಾರಾವಾಹಿಗಳಲ್ಲಿ ರಾಮಾಯಣ ವೀಕ್ಷಕರ ಸಂಖ್ಯೆ ಅತೀ ಹೆಚ್ಚು ಎಂದು ಈ ವರದಿ ಮಾಹಿತಿ ನೀಡಿದೆ. ಮೊದಲ ದಿನದ ಮೊದಲ ಸಂಚಿಕೆ 38 ಮಿಲಿಯನ್ ಜನರಿಂದ ವೀಕ್ಷಿಸಲ್ಪಟ್ಟಿದೆ. ರಾತ್ರಿಯ ಮರು ಪ್ರಸಾರದಲ್ಲಿ ಈ ಸಂಖ್ಯೆ 45 ಮಿಲಿಯನ್ ಗೆ ಏರಿಕೆ ಕಂಡಿತ್ತು. ಮರುದಿನ ಬೆಳಗ್ಗಿನ ಪ್ರಸಾರ  40 ದಶಲಕ್ಷ ಮತ್ತು ಸಂಜೆಯ ಶೋ 51 ದಶಲಕ್ಷ ವೀಕ್ಷಕರಿಂದ ವೀಕ್ಷಿಸಲ್ಪಟ್ಟಿದೆ. ಒಟ್ಟಾಗಿ ರಾಮಾಯಣವನ್ನು 91 ಮಿಲಿಯನ್ ಜನರು ವೀಕ್ಷಣೆ ಮಾಡಿರುವುದಾಗಿ ಪ್ರಸಾರ ಭಾರತಿಯ ವರದಿ ತಿಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಬಾರ್ಕ್ 18 ರಿಂದ 24 ಏಪ್ರಿಲ್ ಒಳಗಾಗಿ ದೂರದರ್ಶನ 1.64  ಬಿಲಿಯನ್ ಜನರಿಂದ ಮೆಚ್ಚುಗೆ ಪಡೆದು ಮೊದಲನೇ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದರೆ, ಸನ್ ಟಿವಿ 1.12 ಬಿಲಿಯನ್ ವೀಕ್ಷಕರನ್ನು ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದೆ.

SCROLL FOR NEXT