ಡಾರ್ಲಿಂಗ್ ಕೃಷ್ಣ ನಿರ್ದೇಶನ ಮತ್ತು ನಾಯಕ ನಟನಾಗಿ ಅಭಿನಯಿಸುತ್ತಿರುವ ಲಾವ್ ಮಾಕ್ ಟೇಲ್ 2 ಚಿತ್ರಕ್ಕೆ ನಾಯಕಿಯಾಗಿ ಹೊಸಬರ ಪ್ರವೇಶವಾಗುತ್ತಿದೆ. ಲವ್ ಮಾಕ್ಟೇಲ್ ನಲ್ಲಿ ಅಭಿನಯಿಸಿದ್ದ ಅಭಿಲಾಶ್ ಮತ್ತು ಖುಷಿ ಆಚಾರ್ ಇದರಲ್ಲೂ ಇರಲಿದ್ದು ಮುಂದುವರಿದ ಭಾಗದಲ್ಲಿ ಮೂರು ಹೊಸ ಪಾತ್ರಗಳ ಪ್ರವೇಶವಾಗುತ್ತಿದೆ.
ಈ ಚಿತ್ರದ ಮೂಲಕ ಸುಶ್ಮಿತಾ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆಡಿಶನ್ ಮೂಲಕ ಸುಶ್ಮಿತಾ ಅವರ ಆಯ್ಕೆ ನಡೆದಿದೆ.
ಡಿಸೆಂಬರ್ ಹೊತ್ತಿಗೆ ಚಿತ್ರವನ್ನು ತೆರೆಗೆ ತರಲು ಉದ್ದೇಶಿಸಿರುವ ಡಾರ್ಲಿಂಗ್ ಕೃಷ್ಣ ಈಗಾಗಲೇ ಶೂಟಿಂಗ್ ಪ್ರಾರಂಭಿಸಿದ್ದಾರೆ. ಇನ್ನಿಬ್ಬರು ನಾಯಕಿಯರನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಕೃಷ್ಣ ಅವರಿದ್ದು ಮತ್ತೊಂದು ಪ್ರಮುಖ ಪಾತ್ರಕ್ಕಾಗಿ ಕಲಾವಿದನನ್ನು ಅಖೈರುಗೊಳಿಸುತ್ತಿದ್ದಾರೆ.
ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಒಟ್ಟಾಗಿ ಚಿತ್ರ ತಯಾರಿಸುತ್ತಿದ್ದು ರಘು ದೀಕ್ಷಿತ್ ಸಂಗೀತ, ಕ್ರೇಜಿಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನವಿದೆ.