ಸಿನಿಮಾ ಸುದ್ದಿ

ಮದುವೆಯಲ್ಲೂ ಮಾನವೀಯತೆ: ಅನಾಥಾಶ್ರಮದಲ್ಲಿ ನಡೆದ ನಟ ಚೇತನ್-ಮೇಘ ಆರತಕ್ಷತೆ

Srinivasamurthy VN

ಬೆಂಗಳೂರು: 'ಆ ದಿನಗಳು' ಖ್ಯಾತಿಯ ನಟ ಚೇತನ್‌ ಹೊಸ ಜೀವನಕ್ಕೆ ಕಾಲಿಟ್ಟಿದ್ದು, ತಮ್ಮ ಬಹುಕಾಲದ ಗೆಳತಿ ಮೇಘಾ ಅವರ ಜತೆ ಫೆಬ್ರವರಿ 1ರಂದು ಶನಿವಾರ ಬೆಂಗಳೂರಿನಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.

ಬೆಂಗಳೂರಿನ ಗಾಂಧಿನಗರದಲ್ಲಿರುವ ಸಬ್‌ ರಿಜಿಸ್ಟ್ರರ್ ಕಚೇರಿಯಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳುವ ಮೂಲಕ ಚೇತನ್ ಮತ್ತು ಮೇಘ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಐಟಿ ಉದ್ಯೋಗಿಯಾಗಿರುವ ಮೇಘಾ ಅವರನ್ನು ಕೆಲ ವರ್ಷಗಳಿಂದ ಚೇತನ್‌ ಪ್ರೀತಿಸುತ್ತಿದ್ದರು. ಚೇತನ್ ಹಾಗೂ ಮೇಘಾ ಅವರ ಕುಟುಂಬದವರನ್ನು ಒಪ್ಪಿಸಿ ಇದೀಗ ಮದುವೆಯಾಗಿದ್ದಾರೆ. ಮದುವೆಯಲ್ಲಿ ಅವರ ಕುಟುಂಬಸ್ಥರು, ಆಪ್ತರು, ಸ್ನೇಹಿತರು ಮಾತ್ರ ಭಾಗಿಯಾಗಿದ್ದರು.

ಕುಟುಂಬಸ್ಥರು, ಸ್ನೇಹಿತರು, ಚಲನಚಿತ್ರ ಮತ್ತು ರಾಜಕೀಯ ಗಣ್ಯರಿಗಾಗಿ ಆರತಕ್ಷತೆ ಮತ್ತು ಸಂತೋಷ ಕೂಟ ಆಯೋಜಿಸಿದ್ದರು. ಚೇತನ್ ಮತ್ತು ಮೇಘ ಆರತಕ್ಷತೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಜಕಾರಣಿ ದಿನೇಶ್ ಗುಂಡೂರಾವ್, ನಟ ಮಯೂರ್ ಪಟೇಲ್, ನಿರ್ದೇಶಕ ಪಿ.ಸಿ.ಶೇಖರ್, ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಸೇರಿದಂತೆ ಚಲನಚಿತ್ರರಂಗದ ಅನೇಕ ಗಣ್ಯರು ಚೇತನ್-ಮೇಘ ಆರತಕ್ಷತೆಯಲ್ಲಿ ಪಾಲ್ಗೊಂಡು ನವ ದಂಪತಿಗೆ ಆಶೀರ್ವಾದ ಮಾಡಿದರು. ಬಂದ ಅತಿಥಿಗಳಿಗೆ ಚೇತನ್-ಮೇಘ ದಂಪತಿ ಸಂವಿಧಾನ ಓದು ಪುಸ್ತಕವನ್ನು ಕಾಣಿಕೆಯನ್ನಾಗಿ ನೀಡುವ ಮೂಲಕ ಅದರಲ್ಲೂ ವಿಶೇಷತೆ ಮೆರೆದರು.

ಬೆಂಗಳೂರಿನ ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದಲ್ಲಿ ಚೇತನ್ ಮತ್ತು ಮೇಘ ರವರ ಆರತಕ್ಷತೆ ನಡೆಯಿತು. ನವಿಲುಗಳ ಚಿತ್ತಾರದಿಂದ ಸಿಂಗಾರಗೊಂಡಿದ್ದ ವೇದಿಕೆ ಮೇಲೆ ನವ ವಧು ವರರಾದ ಮೇಘ ಮತ್ತು ಚೇತನ್ ಕಂಗೊಳಿಸಿದರು. ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದಲ್ಲಿ ನಡೆದ ಚೇತನ್-ಮೇಘ ಆರತಕ್ಷತೆಯಲ್ಲಿ ಅಬ್ಬರ, ಆಡಂಬರ, ವೈಭೋಗ ಇರಲಿಲ್ಲ. ಸರಳ ಮತ್ತು ಸುಂದರವಾಗಿ ಸಂತೋಷ ಕೂಟದಲ್ಲಿ ವಚನ ಗಾಯನ, ಸೂಫಿ ಗಾಯನ, ಕೊರಗ ನೃತ್ಯ, ಲಂಬಾಣಿ ನೃತ್ಯ, ಸಿದ್ಧಿ ನೃತ್ಯ ಮತ್ತು ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು. 

ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಪುನೀತ್ ರಾಜ್ ಕುಮಾರ್, 'ನನಗೆ ಚೇತನ್ 10-12 ವರ್ಷದ ಪರಿಚಯ. ನಾನು ಚೇತನ್ ಅವರನ್ನ ಭೇಟಿ ಆಗಿದ್ದಾಗ ಸಂಪೂರ್ಣ ಕನ್ನಡದಲ್ಲೇ ಮಾತನಾಡುತ್ತಿದ್ದರು. ನಾನೇ ಇನ್ನೂ ಹೆಚ್ಚು ಇಂಗ್ಲೀಷ್ ಬಳಸುತ್ತಿದ್ದೆ. ಆಗ ನಾನು ''ನಿಮ್ಮದು ಯಾವ ಊರು'' ಅಂತ ಕೇಳಿದಾಗ ಅಮೇರಿಕಾದಲ್ಲಿ ಇರೋದು ಅಂತ ಚೇತನ್ ಹೇಳಿದ್ದರು. ಕನ್ನಡದ ಅಭಿಮಾನ ಅವರಿಗೆ ಸಾಕಷ್ಟು ಇದೆ. ಚೇತನ್ ಮತ್ತು ಮೇಘಗೆ ಜೀವನದಲ್ಲಿ ಒಳ್ಳೆಯದಾಗಲಿ'' ಎಂದು ನವ ಜೋಡಿಗೆ ಶುಭಾಶಯ ಕೋರಿದರು.

SCROLL FOR NEXT