ಸಿನಿಮಾ ಸುದ್ದಿ

ಜಾಮೀನು ರಹಿತ ವಾರಂಟ್: ಮತ್ತೆ ಕಾನೂನು ಹೋರಾಟಕ್ಕೆ ಸಿದ್ಧ ಎಂದ ರಕ್ಷಿತ್ ಶೆಟ್ಟಿ

Srinivasamurthy VN

ಬೆಂಗಳೂರು: ಕಾಪಿರೈಟ್‌ ಉಲ್ಲಂಘಿಸಿ ‘ಕಿರಿಕ್‌ ಪಾರ್ಟಿ’ ಚಿತ್ರದಲ್ಲಿ ಹಾಡು ಬಳಸಿದ ಆರೋಪಕ್ಕೆ ಸಂಬಂಧಿಸಿದಂತೆ ಲಹರಿ ಸಂಸ್ಥೆ ನೀಡಿರುವ ಜಾಮೀನು ರಹಿತ ವಾರಂಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ನಟ ರಕ್ಷಿತ್ ಶೆಟ್ಟಿ ನಾವು ಮತ್ತೆ ಕಾನೂನು ಹೋರಾಟ ಮಾಡಲು ಸಿದ್ದ ಎಂದು ಹೇಳಿದ್ದಾರೆ.

ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, 'ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಈಗಾಗಲೇ ಸಿವಿಲ್ ಮತ್ತು ಹೈ ಕೋರ್ಟ್‌ನಲ್ಲಿ ಈ ಕೇಸ್ ಅನ್ನು ಗೆದ್ದಿದೇವೆ. ಮತ್ತೆ ಅದೇ ಪ್ರಕರಣದ ಮೇಲೆ ಇನ್ನೊಂದು ಕೇಸ್‌ ದಾಖಲಿಸುವುದರಿಂದ ಯಾವ ಪ್ರಯೋಜನವಿದೆ? 6 ತಿಂಗಳ ಹಿಂದೆ ಎರಡನೇ ಪ್ರಕರಣ ದಾಖಲಿಸಿದ್ದ ನಮಗೂ ನಮ್ಮ ವಕೀಲರಿಗೂ ಈ ಬಗ್ಗೆ ಮಾಹಿತಿ ನೀಡಿಲ್ಲ ಏಕೆ ಎಂದು  ಪ್ರಶ್ನೆ ಮಾಡಿದ್ದಾರೆ.

ಅಂತೆಯೇ ಮತ್ತೊಂದು ಟ್ವೀಟ್ ನಲ್ಲಿ 'ನಾವು ಮತ್ತೆ ಕಾನೂನು ಹೋರಾಟ ಮಾಡಲು ನಿರ್ಧರಿಸಿದ್ದೇವೆ. ಆಗ ನಮ್ಮ ಸಿನಿಮಾ ಬಿಡುಗಡೆಗೆ ಕಷ್ಟವಾಗಿತ್ತು. ಕೊನೆಯ ಕ್ಷಣದಲ್ಲಿ ಹಾಡನ್ನು ಕತ್ತರಿಸಿ ಚಿತ್ರವನ್ನು ಬಿಡುಗಡೆ ಮಾಡಲಾಯಿತು ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

ಇನ್ನು ಲಹರಿ ಸಂಸ್ಥೆಯು ಎರಡನೇ ಪ್ರಕರಣ ದಾಖಲಿಸಿರುವ ಸಂಬಂಧ ರಕ್ಷಿತ್‌ ಶೆಟ್ಟಿ ಮತ್ತು ತಂಡ ನ್ಯಾಯಾಲಯಕ್ಕೆ ಹಾಜರಾಗದೇ ಇರುವುದಕ್ಕೆ ನ್ಯಾಯಾಲಯ ಜಾಮೀನು ರಹಿತ ವಾರಂಟ್‌ ಹೊರಡಿಸಿದೆ. 2016ರ ಡಿಸೆಂಬರ್ 30ರಂದು ಬಿಡುಗಡೆ ಆದ ಕಿರಿಕ್ ಪಾರ್ಟಿ ಚಿತ್ರದಲ್ಲಿ ಹೇಯ್‌ ಹೂ ಆರ್‌ ಯೂ (Hey who are you) ಹಾಡನ್ನು ಲಹರಿ ಸಂಸ್ಥೆಯ ಅನುಮತಿ ಇಲ್ಲದೆ ಬಳಸಲಾಗಿತ್ತು. ‘ಶಾಂತಿ ಕ್ರಾಂತಿ’ ಚಿತ್ರದ ಹಾಡನ್ನು ಚಿತ್ರದಲ್ಲಿ ಬಳಸಿಕೊಂಡಿದ್ದರಿಂದ ಲಹರಿ ಸಂಸ್ಥೆ 2017ರ ಜನವರಿ 11ರಂದು ದೂರು ದಾಖಲಿಸಿತ್ತು. ಲಹರಿ ಆಡಿಯೋ ಸಂಸ್ಥೆ ಕಾಪಿ ರೈಟ್ ಕಾಯ್ದೆ ಅಡಿ ರಕ್ಷಿತ್ ಶೆಟ್ಟಿ , ಪರಮವ್ಹಾ ಸ್ಟುಡಿಯೋ ಪ್ರೈವೇಟ್ ಲಿಮಿಟೆಡ್ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ವಿರುದ್ಧ ಪ್ರಕರಣ ದಾಖಲಿಸಿತ್ತು. 

SCROLL FOR NEXT