ಸಿನಿಮಾ ಸುದ್ದಿ

ನನಗೆ ಬದುಕು ಬೇಡ, ದಯವಿಟ್ಟು ದಯಾಮರಣ ಕೊಡಿಸಿ: ಫೇಸ್'ಬುಕ್ ನಲ್ಲಿ ಬಿಗ್'ಬಾಸ್ ಜಯಶ್ರೀ ಕಣ್ಣೀರು!

Manjula VN

ಬೆಂಗಳೂರು: ಸ್ಯಾಂಡಲ್ವುಡ್ ನಟಿ ಜಯಶ್ರೀ ರಾಮಯ್ಯ ಅವರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆಂಬುದು ಸ್ಪಷ್ಟವಾಗಿ ತಿಳಿಯುತ್ತಿದೆ. ಮೊನ್ನೆಯಷ್ಟೇ ಸಾಯುವ ಕುರಿತು ಪೋಸ್ಟ್ ಹಾಕಿದ್ದ ಜಯಶ್ರೀ ಅವರು ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದ್ದರು. ಇದೀಗ ಮತ್ತೆ ನನಗೆ ಬದುಕು ಬೇಡ, ದಯವಿಟ್ಟು ದಯಾಮರಣ ಕೊಡಿಸಿ ಎಂದು ಫೇಸ್'ಬುಕ್ ಲೈವ್ ವಿಡಿಯೋದಲ್ಲಿ ಕಣ್ಣೀರಿಟ್ಟಿದ್ದಾರೆ. 

3 ದಿನಂಗಳಿಂದ ನಿರಂತರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಬದುಕಿಗೆ ವಿದಾಯ ಹೇಳುವ ಮಾತು ಆಡಿ ಚರ್ಚೆ ಹುಟ್ಟುಹಾಕಿರುವ ಜಯಶ್ರೀ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಆಸ್ಪತ್ರೆಯಿಂದಲೇ ಫೇಸ್ ಬುಕ್ ಲೈವ್ ವಿಡಿಯೋ ಮಾಡಿದ್ದ ಅವರು, ನಾನು ಹಣ ಅಥವಾ ಪ್ರಚಾರಕ್ಕಾಗಿ ಹೀಗೆ ಮಾಡುತ್ತಿಲ್ಲ. 5 ವರ್ಷ ವಯಸ್ಸಿನಲ್ಲಿಯೇ ನನ್ನ ಮೇಲೆ ದೌರ್ಜನ್ಯ ನಡೆದಿತ್ತು. ಹುಡುಗಿಯರಿಂದಲೂ ಲೈಂಗಿಕ ದೌರ್ಜನ್ಯ ನಡೆದಿದೆ. 7 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇನೆ. ಬದುಕು ಸಾಕಾಗಿದೆ. ನನಗೆ ದಯಾಮರಣ ಕೊಡಿಸಿ ಎಂದು ಕೋರಿದ್ದಾರೆ. 

ನನಗೆ ಯಾರಿಂದಲೂ ಒಂದು ರೂಪಾಯಿ ಬೇಡ. ನಟ ಸುದೀಪ್ ಅವರ ಟ್ರಸ್ಟ್ ನನ್ನ ತಾಯಿ ಸಹಲುವ ಜವಾಬ್ದಾರಿ ಹೊತ್ತರೆ ನಿಶ್ಚಿಂತೆಯಿಂದ ಸಾಯುತ್ತೇನೆ. ಪ್ರತಿದಿನ ಮನೆಯಲ್ಲಿ ಆಸ್ತಿಗಾಗಿ ನನ್ನ ಅಣ್ಣ ಗಲಾಟೆ ಮಾಡುತ್ತಾನೆ. ತಾಯಿ ಮತ್ತು ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಅರೆ ಹುಚ್ಚಿಯಾಗಿದ್ದೇನೆ. ನಾನು ಕೆಟ್ಟ ಹುಡುಗಿ. ನನ್ನಂಥವಳು ಉಳಿಯಲೇಬಾರದು. ಕೊರೋನಾ ಬರಲಿ ಎಂದು ಬೀದಿ ಬೀದಿ ಅಲೆದಿದ್ದೇನೆಂದು ಅಲವತ್ತುಕೊಂಡಿದ್ದಾರೆ. 

ಧೈರ್ಯ ಹೇಳಿದ ಕಿಚ್ಚಾ ಸುದೀಪ್: ಸಾವಿನ ನಿರ್ಧಾರದಿಂದ ಹಿಂದೆ ಸರಿದ ನಟಿ
ಈ ನಡುವೆ ವಿಚಾರ ತಿಳಿಯುತ್ತಿದ್ದಂತೆಯೇ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿದ ಸುದೀಪ್ ಅವರು, ಜಯಶ್ರೀ ಅವರಿಗೆ ಬದುಕಿನ ಪಾಠ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಜಯಶ್ರೀಯವರು ಸಾವಿನ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ನೀವು ಬಿಗ್ ಬಾಸ್ ಸ್ಪರ್ಧಿಯಾಗಿ ಮಾತ್ರ ನನಗೆ ಗೊತ್ತು. ಅದಕ್ಕಿಂತಲೂ ಹೆಚ್ಚು ನನಗೆ ಗೊತ್ತಿಲ್ಲ. ಕಷ್ಟ ಎಲ್ಲರಿಗೂ ಬರುತ್ತವೆ. ಸಮಸ್ಯೆ ಇವೆ ಎಂದು ಆತ್ಮಹತ್ಯೆ ಒಳ್ಳೆಯದಲ್ಲ. ಯಾರಿಗೂ ಯಾರ ಬದುಕನ್ನು ಕೊಲ್ಲುವ ಅಧಿಕಾರವಿಲ್ಲ. ಸಾವಿಗಿಂದ ಜೀವನ ದೊಡ್ಡದು. ನೀವೇ ಹೇಳಿಕೊಂಡಂತೆ ನಿಮಗೆ ಸಾಕಷ್ಟು ಸಮಸ್ಯೆ ಇವೆ. ಇದರ ನಡುವೆಯೇ ನೀವು ಬದುಕಿ ತೋರಿಸುವ ಮೂಲಕ ಇನ್ನೊಬ್ಬರಿಗೆ ಸ್ಫೂರ್ತಿಯಾಗಿ ನಿಲ್ಲುವ ದೊಡ್ಡ ಅವಕಾಶ ನಿಮ್ಮ ಮುಂದೆ ಿದೆ. ಅದನ್ನು ನೀವು ಬಳಸಿಕೊಳ್ಳಿ. ಸಾವಿನ ಮಾತು ದೂರ ತಳ್ಳಿ. 

ನಿಮಗಿಂತ ದೊಡ್ಡ ಕಷ್ಟು ಇರುವ ಜನರು ಇಲ್ಲಿದ್ದಾರೆ. ಅವರೆಲ್ಲಾ ಸಾಯುವ ಮಾತು ಆಡುತ್ತಿಲ್ಲ. ಅವರ ಸಮಸ್ಯೆಗಳ ಮುಂದೆ ನಿಮ್ಮ ಕಷ್ಟ ತೀರಾ ಚಿಕ್ಕವು. ನಿಮಗೆ ಬದುಕುವ ದಾರಿಗಳು ತುಂಬಾ ಇವೆ. ಅವನ್ನು ಬಳಸಿಕೊಳ್ಳಿ. ಅದರ ಆಚೆಗೂ ನಾವೆಲ್ಲಾ ಇರುತ್ತೇವೆ. ನಿಮ್ಮ ಜೀವನ ಮತ್ತೊಬ್ಬರಿಗೆ ಮಾದರಿಯಾಗಬೇಕು. ಸುಂದರವಾದ ಜೀವನವನ್ನು ಯಾವ ಕಾರಣಕ್ಕೂ ಕಳೆದುಕೊಳ್ಳಬೇಡಿ ಎಂದು ಹೇಳಿದ್ದಾರೆ. 

ಸುದೀಪ್ ಅವರು ಧೈರ್ಯ ಹೇಳಿದ ಹಿನ್ನೆಲೆಯಲ್ಲಿ ಜಯಶ್ರೀ ರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಧನ್ಯವಾದಗಳನ್ನು ಹೇಳಿದ್ದಾರೆ. 

ಧನ್ಯವಾದಗಳು ಸುದೀಪ್ ಸರ್, ನೀವು ಹಾಗೂ ನಿಮ್ಮ ತಂಡದವರು ನನ್ನ ಪ್ರೀತಿಯ ಸ್ನೇಹಿತರು, ಅಭಿಮಾನಿಗಳು ಇಂದು ನನ್ನನ್ನು ಕಾಪಾಡಿದ್ದಾರೆ. ನಿಮ್ಮನ್ನು ಆತಂಕಕ್ಕೊಳಗಾಗುವಂತೆ ಮಾಡಿದ್ದಕ್ಕೆ ಕ್ಷಮೆಯಿರಲಿ. ಮತ್ತೆ ಫಾರ್ಮ್'ಗೆ ಬಂದಿದ್ದೇನೆ. ಮಾಧ್ಯಮಗಳ ಬೆಂಬಲಕ್ಕ ಧನ್ಯವಾದಗಳು. ನಿಮಗೆ ಎಂದಿಗೂ ನಾನು ಋಣಿಯಾಗಿರುತ್ತೇನೆಂದು ತಿಳಿಸಿದ್ದಾರೆ. ಅಲ್ಲದೆ, ದಯಾಮರಣ ಕೋರಿ ಈ ಹಿಂದೆ ಮಾಡಿದ್ದ ಫೇಸ್ಬುಕ್ ಲೈವ್ ಚಾಟನ್ನು ತೆಗೆದುಹಾಕಿದ್ದಾರೆ. 

SCROLL FOR NEXT